ಹಿರಿಯ ನಾಗರಿಕರಿಗೆ ಆರೈಕೆ: ಸರ್ಟಿಫಿಕೇಟ್ ಕೋರ್ಸ್
ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಹಾಗೂ ಡೆವಲಪ್ಮೆಂಟ್ ಎಜ್ಯುಕೇಶನ್ ಸರ್ವಿಸ್ (ಡೀಡ್ಸ್) ಮಂಗಳೂರು ಜಂಟಿ ಸಹಯೋಗದೊಂದಿಗೆ ಹಿರಿಯ ನಾಗರಿಕರಿಗೆ ಆರೈಕೆದಾರರಾಗಲು ಇಚ್ಚಿಸುವ ಆಕ್ತರಿಗೆ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗುತ್ತಿದೆ.
ಈ ಕೋರ್ಸ್ನಲ್ಲಿ ತರಬೇತಿ ಹೊಂದಿದ ಅಭ್ಯರ್ಥಿಗಳು ಹಿರಿಯ ನಾಗರಿಕರ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡುವ ವಿವಿಧ ಬಗೆಯ ಕೌಶಲ್ಯವನ್ನು ಪಡೆದು ಉನ್ನತ ಮಟ್ಟದ ಸೇವೆಯನ್ನು ನೀಡಲು ಪರಿಣತಿಯನ್ನು ಹೊಂದುತ್ತಾರೆ. ತರಬೇತಿಯಲ್ಲಿ ಉತ್ತೀರ್ಣರಾಗುವ ಯಾವುದೇ ಅಭ್ಯರ್ಥಿ ಸ್ವಗೃಹದಲ್ಲಿ, ನೆರೆಹೊರೆಯಲಿ, ಆಸ್ಪತ್ರೆಗಳಲ್ಲಿ ವಯೋವೃದ್ಧರ ಆಶ್ರಯತಾಣಗಳಲ್ಲಿ, ಡೇ ಕೇರ್ ಕೇಂದ್ರಗಳಲ್ಲಿ ಸೇವೆ ಒದಗಿಸಲು ಅರ್ಹತೆಯನ್ನು ಹೊಂದುತ್ತಾರೆ ಎಂದು ಸಂತ ಅಲೋಶಿಯಸ್ ವಿವಿ ಪ್ರೊ ವೈಸ್ ಛಾನ್ಸಲರ್ -. ಡಾ. ಮೆಲ್ವಿನ್ ಡಿಕುನ್ಹ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೋರ್ಸ್ ವಿವರ:
ಕೋರ್ಸ್ ಅವಧಿ ಒಂದು ತಿಂಗಳು (126 ದಿನಗಳು ಒಟ್ಟು 162 ಗಂಟೆಗಳು). ನ.3ರಂದು ಮೊದಲ ಬ್ಯಾಚ್, ಜನವರಿ 3ರಂದು ಎರಡನೇ ಬ್ಯಾಚ್ ಆರಂಭಗೊಳ್ಳಲಿದೆ. ಬಳಿಕ ಕಾಲಕಾಲಕ್ಕೆ ಬ್ಯಾಚ್ ಮುಂದುವರೆಯಲಿದೆ. ಉದ್ಯೋಗದಲ್ಲಿರುವವರಿಗೆ ವಾರಾಂತ್ಯದ ಬ್ಯಾಚನ್ನು 2026ರ ಫೆಬ್ರವರಿಯಿಂದ ನಡೆಸಲಾಗುವುದು (ವರ್ಷದ 26 ಭಾನುವಾರ). ಮಂಗಳೂರು ನಗರದ ಹೊರವಲಯದವರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಕೋರ್ಸ್ ವೆಚ್ಚ ಪ್ರತಿ ಅಭ್ಯರ್ಥಿಗೆ ರೂ. 7,500 ಊಟ, ವಸತಿ ಪ್ರತ್ಯೇಕ. ಆರ್ಥಿಕ ಅನಾನುಕೂಲತೆ ಇರುವ ಅಭ್ಯರ್ಥಿಗಳಿಗೆ ವಿದ್ಯಾರ್ಥಿವೇತನ ಅಥವಾ ಶುಲ್ಕದಲ್ಲಿ ರಿಯಾಯತಿ ನೀಡಲಾಗುವುದು ಎಂದರು.
ಅನುಕೂಲಗಳು..
ತರಬೇತಿ ಹೊಂದಿ ಪ್ರಮಾಣ ಪತ್ರ ಪಡೆದವರಿಗೆ ವಿವಿಧ ಆಸ್ಪತ್ರೆ, ವೃದ್ಧಾಶ್ರಮ, ಹಿರಿಯ ನಾಗರಿಕರ ಡೇಕೇರ್ ಕೇಂದ್ರಗಳಲ್ಲಿ ಆರೈಕೆದಾರರನ್ನು ಒದಗಿಸುವ ಏಜೆನ್ಸಿಗಳಲ್ಲಿ ಉದ್ಯೋಗ ಲಭ್ಯ.
ತುಳು, ಕೊಂಕಣಿ, ಬ್ಯಾರಿ, ಅರೆಬಿಕ್, ಮಲೆಯಾಳಂ, ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಹೀಬ್ರೂ ಮಾತಾಡಲು ಬಲ್ಲವರಿಗೆ ವಿದೇಶಗಳಲ್ಲಿ ವಿಪುಲ ಅವಕಾಶ. ದ್ವಿಚಕ್ರ ವಾಹನ ಚಲಾಯಿಸಲು ಬಲ್ಲವರಿಗೆ, ಪಾಸ್ ಪೋರ್ಟ್ ಇದ್ದವರಿಗೆ ತಕ್ಷಣದ ಉದ್ಯೋಗ ಅವಕಾಶ. ಸರಕಾರಿ, ಅರೆಸರ್ಕಾರಿ ಮತ್ತು ಖಾಸಗಿ ಆರೋಗ್ಯ ವಲಯಗಳಲ್ಲಿ ಶುಶ್ರೂಷಾ ಸಹಾಯಕರಾಗಲು ಅನುಕೂಲ. ಸ್ವಂತ ಆರೈಕೆದಾರ ಸೇವಾ ಏಜೆನ್ಸಿ ಅಥವಾ ಡೇಕೇರ್ ಕೇಂದ್ರ ನಡೆಸಲು ಅರ್ಹತೆಯನ್ನು ಪಡೆಯಬಹುದು ಎಂದರು.
ಡೀಡ್ಸ್ ನಿರ್ದೇಶಕಿ ಮರ್ಲಿನ್ ಮಾರ್ಟಿಸ್, ಕೋರ್ಸ್ ಸಂಯೋಜಕಿ ಉಷಾ ಮರಿಯ ಪಿರೇರ, ಡಾ. ಪೃಥ್ವಿ, ಚಂದ್ರಕಲಾ ಉಪಸ್ಥಿತರಿದ್ದರು.