ಎಸ್‌ಐಟಿ ವಿಚಾರಣೆಗೆ ಬಂದ ಆಂಬುಲೆನ್ಸ್ ಚಾಲಕರು
ಮಂಗಳೂರು: ಅನಾಥ ಶವಗಳನ್ನು ಸಾಗಿಸಿದ ಆಂಬುಲೆನ್ಸ್ ಚಾಲಕರಿಬ್ಬರನ್ನು ಸೋಮವಾರ ಎಸ್‌ಐಟಿ ವಿಚಾರಣೆಗೆ ಕರೆಸಿಕೊಂಡಿದೆ. ವಿಚಾರಣೆ ಮುಗಿಸಿ ಸಂಜೆ ಹೊರಬಂದ ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ ಸುದ್ದಿಗಾರರಲ್ಲಿ ಮಾತನಾಡಿ, ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೀರಿ, ಏನೆಲ್ಲ ಕೆಲಸ ಎಂದು ಎಸ್‌ಐಟಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಎಲ್ಲದಕ್ಕೂ ಸಮರ್ಪಕ ಉತ್ತರ ನೀಡಿದ್ದೇವೆ ಎಂದಿದ್ದಾರೆ.
ಅನಾಥ ಶವ ಸಿಕ್ಕಿದ್ದ ಬಗ್ಗೆ ಪೊಲೀಸರು ಫೋನ್ ಮಾಡುತ್ತಿದ್ದರು. ಆಗ ನಾವು ಹೋಗಿ ಶವ ಸಾಗಿಸುವ ಕೆಲಸ ಮಾಡುತ್ತಿದ್ದೆವು. ನಾವು ಚಿನ್ನಯ್ಯನನ್ನು ತುಂಬಾ ಸಲ ನೋಡಿದ್ದೇವೆ. ಅನಾಥ ಶವಗಳು ಸಿಕ್ಕಿದಾಗ ಚಿನ್ನಯ್ಯ ಕೂಡ ಇರುತ್ತಿದ್ದ. ಆಗ ಪೊಲೀಸರು ಕೂಡ ಇರುತ್ತಿದ್ದರು, ಅವರು ಹೇಳಿದಂತೆ ಮಾಡುತ್ತಿದ್ದೆವು. ಶವವನ್ನು ಸಾಗಿಸುವ ಮೊದಲು ಫೋಟೋ ತೆಗೆದುಕೊಳ್ಳುತ್ತಿದ್ದರು. ನಮ್ಮ ಹೇಳಿಕೆಯನ್ನು ಎಸ್‌ಐಟಿಯವರು ವಿಡಿಯೋ ದಾಖಲು ಮಾಡಿಕೊಂಡಿದ್ದಾರೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಜಾಗ ಇಲ್ಲದಿದ್ದಾಗ ಶವವನ್ನು ಬೇರೆ ಕಡೆ ಶಿಫ್ಟ್ ಮಾಡುತ್ತಿದ್ದೆವು. ಅನಾಥ ಶವ ಸಿಕ್ಕಾಗ ಪೊಲೀಸರು ಫೋನ್ ಮಾಡಿ ಕರೆಸಿಕೊಳ್ಳುತ್ತಿದ್ದರು. ಅಪಘಾತ ಸಂಭವಿಸಿದಾಗ ಮಾತ್ರ ನಾಗಿರಕರು ಕರೆ ಮಾಡುತ್ತಿದ್ದರು. ನಾವು ಕಳೆದ 25 ವರ್ಷದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಎಂದಿದ್ದಾರೆ.