ಬ್ಯಾರಿ ಭಾಷಾ ದಿನಾಚರಣೆ-2025: ಅಭಿನಂದನಾ ಸಮಾರಂಭ
ಅವರು ಅಖಿಲ ಭಾರತ ಬ್ಯಾರಿ ಪರಿಷತ್ (ರಿ.) ಇದರ ಆಶ್ರಯದಲ್ಲಿ, ಅಖಿಲ ಭಾರತ ಬ್ಯಾರಿ ಮಹಿಳಾ ಘಟಕದ ಸಹಯೋಗದಲ್ಲಿ ನಗರದ ಖಾಸಗಿ ಸಭಾಂಗಣದಲ್ಲಿ ಸೋಮವಾರ ನಡೆದ ಬ್ಯಾರಿ ಭಾಷಾ ದಿನಾಚರಣೆ-2025 ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನೆಯಲ್ಲಿ ಈಗ ಪಾಶ್ಚಾತ್ಯ ಸಂಸ್ಕೃತಿ ಬಳಕೆ ಆಗುತ್ತಿದೆ. ಕಿಚನ್, ಬಾತ್ ರೂಮ್‌ಗೆ ಬ್ಯಾರಿ ಭಾಷೆ ಶಬ್ದ ಏನು ಎಂಬುದು ನಮ್ಮ ಮಕ್ಕಳಿಗೆ ಗೊತ್ತಿಲ್ಲ. ವಿದ್ಯಾರ್ಥಿಗಳಿಗೆ ಎಷ್ಟು ಭಾಷೆ ಕಲಿಸಲು ಸಾಧ್ಯ ಆಗುತ್ತದೆಯೋ ಅಷ್ಟು ಭಾಷೆ ಕಲಿಸಬೇಕು. ಕನಿಷ್ಠ ೧೪ ಭಾಷೆಗಳನ್ನಾದರೂ ಕಲಿಸಬೇಕು. ಬ್ಯಾರಿ ಭಾಷೆ ಅಭಿವೃದ್ಧಿ ಆಗಲು ಬ್ಯಾರಿ ಭಾಷೆಗೆ ಸಂಬಂಧಿಸಿದ ಸಂಘಟನೆಗಳು ಬೇಕು. ಭಾಷಾ ಅಭಿವೃದ್ಧಿಗೆ ಸಂಬಂಧಿಸಿ ಕೆಲಸ ಮಾಡುವ ಸಂಘಟನೆಗಳಿಗೆ ನಾವು ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.
ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಯು.ಎಚ್. ಖಾಲಿದ್ ಉಜಿರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬ್ಯಾರಿ ಭಾಷಿಕರ ಘಟಕ ಮಾಡಬೇಕು ಎಂಬ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಅಡ್ಡೂರು, ಬೆಳ್ತಂಗಡಿ ಕಡೆಯಲ್ಲಿ ಬ್ಯಾರಿ ಘಟಕ, ಕಾಪುವಿನಲ್ಲಿ ಬ್ಯಾರಿ ಮಹಿಳಾ ಘಟಕ ನಿರ್ಮಾಣ ಮಾಡುವ ಯೋಜನೆ ಇದೆ ಎಂದರು.
ಟಿಎಂ ಶಹೀದ್ ಮಾತನಾಡಿ, ಸುಳ್ಯದಲ್ಲಿ ಬ್ಯಾರಿ ಭಾಷೆ ಮಾತನಾಡುವವರನ್ನು ತಳಮಟ್ಟದ ಸ್ಥಾನದಲ್ಲಿ ನೋಡುವ ಒಂದು ಕಾಲವಿತ್ತು. ಆದರೆ ಈಗ ಬ್ಯಾರಿ ಜನಾಂಗ ದವರಿಗೆ ತನ್ನದೇ ಆದ ಸ್ಥಾನ, ಗೌರವ ಉಳಿಸಲು ಅವಕಾಶ ಸಿಕ್ಕಿದೆ. ಭಾಷಾ ಶ್ರೀಮಂತಿಕೆ ಬೇಕು. ಅಭಿವೃದ್ಧಿ ನಮ್ಮ ಗುರಿ ಆಗಬೇಕು ಎಂದರು.
ಅ.ಭಾ.ಬ್ಯಾ.ಪ. ಸ್ಥಾಪಕ ಅಧ್ಯಕ್ಷ ಜೆ. ಹುಸೈನ್, ಅ.ಭಾ.ಬ್ಯಾ. ಮಹಿಳಾ ಘಟಕದ ಅಧ್ಯಕ್ಷೆ ಶಮೀಮ ಕುತ್ತಾರ್ ಮಾತನಾಡಿದರು.
ಶೆರೀಫ್ ನೀರ್ಮುಂಜೆ ಧ್ಯೇಯ ಗೀತೆ ಹಾಡಿದರು. ಯೂಸುಫ್ ವಕ್ತಾರ್ ಅಭಿನಂದನಾ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಯೋಜಿತ ಅಧ್ಯಕ್ಷ ಎಂ.ಎ. ಗಫೂರ್, ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾದ ಅಲಿಯಬ್ಬ ಜೋಕಟ್ಟೆ, ಶಾಹುಲ್ ಹಮೀದ್ ಗುರುಪುರ, ಹಸನಬ್ಬ ಮೂಡಬಿದ್ರಿ ಅವರನ್ನು ಸನ್ಮಾನಿಸಲಾಯಿತು.
ಬ್ಯಾರಿ ಭಾಷಾ ದಿನಾಚರಣೆ ಪ್ರಯುಕ್ತ ಜರುಗಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಖಿಲ ಭಾರತ ಬ್ಯಾರಿ ಪರಿಷತ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಡುಪದವು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ನಿಸಾರ್ ಅಹಮದ್ ವಂದಿಸಿದರು. ಅ.ಭಾ.ಬ್ಯಾ.ಪ. ಮಹಿಳಾ ಘಟಕದ ಉಪಾಧ್ಯಕ್ಷ ಅಸ್ಮತ್ ವಗ್ಗ ಕಾರ್ಯಕ್ರಮ ನಿರೂಪಿಸಿದರು. ರೇಶ್ಮಾ ಕಿರಾಅತ್ ಪಠಿಸಿದರು.