ಮತಗಳ್ಳತನ: ದ.ಕ. ಜಿಲ್ಲೆಯಲ್ಲಿ ಸಹಿ ಸಂಗ್ರಹ ಅಭಿಯಾನ

ಮತಗಳ್ಳತನ: ದ.ಕ. ಜಿಲ್ಲೆಯಲ್ಲಿ ಸಹಿ ಸಂಗ್ರಹ ಅಭಿಯಾನ

ಮಂಗಳೂರು: ಮತಗಳ್ಳತನದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಅಭಿಯಾನದ ಅಂಗವಾಗಿ ದ.ಕ. ಜಿಲ್ಲೆಯಲ್ಲೂ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯ 1862 ಬೂತ್‌ಗಳಲ್ಲಿ ಕನಿಷ್ಠ ಬೂತ್ ಗೆ 100ರಂತೆ ಸಹಿ ಸಂಗ್ರಹ ಮಾಡಲು ತೀರ್ಮಾನಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.

ಮನಪಾ ಕಟ್ಟಡದಲ್ಲಿರುವ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 18,000 ಸಹಿ ಸಂಗ್ರಹದ ಗುರಿ ಇರಿಸಲಾಗಿದ್ದು, ಅ.13 ಮತ್ತು 14ರಂದು ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗುವುದು ಎಂದರು. 

13ರಂದು ಸಂಜೆ 4 ಗಂಟೆಗೆ ಉರ್ವಾಸ್ಟೋರ್ ಜಂಕ್ಷನ್ ನಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಸಲಾಗುವುದು. ಬಳಿಕ ಅಲ್ಲಿ ಸಹಿ ಸಂಗ್ರಹ ನಡೆಸಿ ಸಂಜೆ 6.30ಕ್ಕೆ ಕುದ್ರೋಳಿಯಲ್ಲಿ, ಅ.14ರಂದು ಸಂಜೆ 3 ಗಂಟೆಗೆ ಶಕ್ತಿನಗರ, 4.30ಕ್ಕೆ ಬಿಕರ್ನಕಟ್ಟೆ, 6 ಗಂಟೆಗೆ ಕದ್ರಿ ಮಾರುಕಟ್ಟೆ ಬಳಿ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ. ಇದಲ್ಲದೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪಂಜಿನ ಮೆರವಣಿಗೆಯನ್ನೂ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು. 

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಗಣತಿಗೆ ಜಿಲ್ಲೆಯಲ್ಲೂ ಉತ್ತಮ ಸ್ಪಂದನ ದೊರಕಿದೆ. ರಾಜ್ಯದಲ್ಲಿ ಸಮೀಕ್ಷೆಯಲ್ಲಿ 10ನೆ ಸ್ಥಾನದಲ್ಲಿ ದ.ಕ. ಜಿಲ್ಲೆ ಇದೆ. ಸುಳ್ಯ, ಪುತ್ತೂರು, ಕಡಬ, ಮೂಡುಬಿದಿರೆಗಳಲ್ಲಿ ನಿನ್ನೆಯವರೆಗೆ ಶೇ.100 ಸಮೀಕ್ಷೆ ನಡೆದಿದೆ. ಉಳಿದಂತೆ ಮಂಗಳೂರು ಸಮೀಕ್ಷೆಯಲ್ಲಿ ಹಿಂದುಳಿದಿದೆ. ಇಲ್ಲಿನ ಹೆಚ್ಚು ಮಂದಿ ವಿದೇಶದಲ್ಲಿರುವುದರಿಂದ ಕೆಲವರು ಪಿಜಿಗಳಲ್ಲಿ ವಾಸವಾಗಿರುವುದು, ಎರಡೆರಡು ಮನೆಗಳನ್ನು ಹೊಂದಿರುವುದು, ಹೊರ ಜಿಲ್ಲೆಗಳವರು ಇರುವುದರಿಂದ ಸಮೀಕ್ಷೆಗೆ ತೊಡಕುಂಟಾಗಿದೆ ಎಂದು ಐವನ್ ತಿಳಿಸಿದರು 

ಸರ್ವರ ಜೀವನ ಮಟ್ಟವನ್ನು ಅರಿತುಕೊಂಡು ಅಗತ್ಯವಾದ ಸೌಲಭ್ಯಗಳನ್ನು, ಯೋಜನೆಗಳನ್ನು ಸಿದ್ಧಗೊಳಿಸಲು ಪೂರಕವಾಗಿ ಈ ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸುವುದು ಅಗತ್ಯವಾಗಿದೆ. ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ವಿಪಕ್ಷವಾಗಿ ಸಾಮಾಜಿಕ ಬದ್ಧತೆ ಇದ್ದಲ್ಲಿ ಸರಕಾರದ ಈ ಕಾರ್ಯದಲ್ಲಿ ವಿರೋಧ ಮಾಡಬಾರದು ಎಂದವರು ಹೇಳಿದರು. 

ಸಮೀಕ್ಷೆ ವಿಷಯದಲ್ಲಿ ರಾಜಕೀಯ ಮಾಡುವ ಅಗತ್ಯ ಇಲ್ಲ. ಯಾವುದೇ ಪಕ್ಷದ ಸರಕಾರ ಅಸ್ತಿತ್ವದಲ್ಲಿದ್ದರೂ ಈ ಸಮೀಕ್ಷೆಯು ಜನರ ಅಭಿವೃದ್ದಿಯ ದೃಷ್ಟಿಯಿಂದ ಪೂರಕವಾಗಿದೆ. ಹಾಗಾಗಿ ಎಲ್ಲರೂ ಸಹಕರಿಸಬೇಕು ಎಂದು ಅವರು ಕರೆ ನೀಡಿದರು. 

ಮುಖಂಡರಾದ ಶಶಿಧರ ಹೆಗ್ಡೆ, ಪ್ರಕಾಶ್ ಸಾಲ್ಯಾನ್, ನಾಗೇಂದ್ರ ಕುಮಾರ್, ಸತೀಶ್ ಪೆಂಗಲ್, ಭಾಸ್ಕರ್, ಪ್ರೇಮ್ ಬಲ್ಲಾಳ್ ಬಾಗ್, ಮೀನಾ ಟೆಲ್ಲಿಸ್, ಚಂದ್ರಹಾಸ, ಇಮ್ರಾನ್, ಗಣೇಶ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article