ಬಾಲವನ ಪ್ರಶಸ್ತಿಗೆ ಜತೆಗೆ ‘ಕಾರಂತ ಉತ್ಸವ’ ನಡೆಯಲಿ: ಡಾ.ವಿವೇಕ್ ರೈ

ಬಾಲವನ ಪ್ರಶಸ್ತಿಗೆ ಜತೆಗೆ ‘ಕಾರಂತ ಉತ್ಸವ’ ನಡೆಯಲಿ: ಡಾ.ವಿವೇಕ್ ರೈ


ಪುತ್ತೂರು: ಡಾ.ಶಿವರಾಮ ಕಾರಂತರ ಅನುಭವ ಘನೀಕರಿಸಿದ ಸಾಹಿತ್ಯದ ನೆಲೆ ಬಾಲವನ. ಅವರ ಮೇರುಕೃತಿಗಳು ಈ ಬಾಲವನದಲ್ಲಿಯೇ ಸೃಷ್ಟಿಯಾಗಿವೆ. ಕಾರಂತರು ಯಾವುತ್ತೂ ಊಹಾಲೋಕದಲ್ಲಿ ಬದುಕಿದವರಲ್ಲ. ಬರೆದವರೂ ಅಲ್ಲ. ಅವರ ಪ್ರತಿಯೊಂದು ಕಾದಂಬರಿಯ ಹಿಂದೆ ಅಪಾರವಾದ ಶ್ರಮ ಇದೆ. ಮನೆ-ಮನೆಗಳಿಗೆ ಹೋಗಿ ಪಡೆದ ಅನುಭವ ಇದೆ. ಇಂತಹ ಕಾರಂತರ ಹೆಸರಲ್ಲಿ ನೀಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ‘ಕಾರಂತ ಉತ್ಸವ’ ನಡೆಸುವ ಮೂಲಕ ನಡೆದರೆ ಅದು ಪುತ್ತೂರಿಗೆ ದೊಡ್ಡ ಆಕರ್ಷಣೆ ಮತ್ತು ಹೆಮ್ಮೆಯಾಗುತ್ತದೆ ಎಂದು ಸಾಹಿತಿ ಸಂಶೋಧಕ ಡಾ.ಬಿ.ಎ.ವಿವೇಕ್ ರೈ ಹೇಳಿದರು.

ಪುತ್ತೂರಿನ ಪರ್ಲಡ್ಕದ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು,ಡಾ.ಶಿವರಾಮ ಕಾರಂತ ಬಾಲವನ ಮತ್ತು ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಡಾ.ಶಿವರಾಮ ಕಾರಂತರ 124 ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಬಾಲವನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. 

ಕೊಟ್ಟಿಗೆಹಾರ ಮಾದರಿಯಲ್ಲಿ ‘ಬಾಲವನ’:

ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಅಶೋಕ್ ರೈ ಅವರು ಮಾತನಾಡಿ, ಡಾ.ಶಿವರಾಮ ಕಾರಂತರು ಪುತ್ತೂರಿನ ಹೆಮ್ಮೆ. ಅವರ ಕರ್ಮಭೂಮಿ ಬಾಲವನವನ್ನು ಪ್ರಾಕೃತಿಕವಾಗಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗುವುದು.  ಸಾಹಿತಿ ಪೂರ್ಣಚಂದ್ರ ಚಂದ್ರ ತೇಜಸ್ವಿ ಅವರ ಕೊಟ್ಟಿಗೆಹಾರ ಮತ್ತು ಕುಪ್ಪಳ್ಳಿ ಮಾದರಿಯಲ್ಲಿ ಅವರ ಸ್ಮಾರಕವನ್ನು ನಿರ್ಮಾಣ ಮಾಡಿರುವ ಕೊಟ್ಟಿಗೆಹಾರದ ಮಾದರಿಯಲ್ಲಿ ಬಾಲವನ ಅಭಿವೃದ್ಧಿಗೆ ಚಿಂತನೆ ಮಾಡಲಾಗುವುದು. ಈಗಾಗಲೇ ಬಾಲವನ ಅಭಿವೃದ್ಧಿ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ಹಾಗೂ ಸಾಹಿತಿಗಳ ನೇತೃತ್ವದಲ್ಲಿ ಕೊಟ್ಟಿಗೆಹಾರವನ್ನು ವೀಕ್ಷಣೆ ಮಾಡಿ ಬಳಿಕ ಆ ಮಾದರಿಯನ್ನು ಇಟ್ಟುಕೊಂಡು ಇಲ್ಲಿ ಕಾರ್ಯಪ್ರವೃತ್ತರಾಗುವ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು. 

ಡಾ.ಶಿವರಾಮ ಕಾರಂತರ ಪುತ್ರಿ, ಓಡಿಸ್ಸಿ ನೃತ್ಯ ಕಲಾವಿದೆ ಕ್ಷಮಾ ರಾವ್ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ ಇದ್ದರು.  ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಪ್ರಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶ ರಾಜೇಶ್ ಜಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಜಗನ್ನಾಥ್ ಅರಿಯಡ್ಕ ವಂದಿಸಿದರು, ಕಾರ್ಯಕ್ರಮ ಸಂಯೋಜಕ ರಮೇಶ್ ಉಳಯ ನಿರೂಪಿಸಿದರು. 

ಪ್ರಶಸ್ತಿ ಪ್ರದಾನ:

ಡಾ.ಶಿವರಾಮ ಕಾರಂತ ಬಾಲವನ ಪ್ರಶಸ್ತಿಯು ಕಾರಂತರ ಪುತ್ಥಳಿಯ ಫಲಕ, ಸ್ಮರಣಿಕೆ, ರೂ.25 ಸಾವಿರ ನಗದು ಹಣವನ್ನು ಒಳಗೊಂಡಿದ್ದು, 2024ರ ಬಾಲವನ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಹಿರಿಯ ಸಾಹಿತಿ, ನಿವೃತ್ತ ಉಪಕುಲಪತಿ ಡಾ.ಬಿ.ಎ.ವಿವೇಕ್ ರೈ ಹಾಗೂ 2025ರ ಬಾಲವನ ಪ್ರಶಸ್ತಿಯನ್ನು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಹಿರಿಯ ಶಿಕ್ಷಣ ತಜ್ಞ ಹಾಗೂ ಶಿಕ್ಷಣ ಸಾಹಿತಿ ಡಾ.ಎನ್.ಸುಕುಮಾರ ಗೌಡ ಅವರಿಗೆ ಪ್ರದಾನ ಮಾಡಲಾಯಿತು.

ಡಾ.ವಿವೇಕ್ ರೈ ಅವರ ಬಗ್ಗೆ ಮುಂಬಯಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್, ಡಾ.ಸುಕುಮಾರ ಗೌಡ ಅವರ ಬಗ್ಗೆ ಪುತ್ತೂರಿನ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕ್ಸೇವಿಯರ್ ಡಿ.ಸೋಜಾ ಅವರು ಅಭಿನಂದನಾ ನುಡಿಗಳನ್ನಾಡಿದರು. ಪ್ರಶಸ್ತಿ ಸ್ವೀಕರಿಸಿದ ಡಾ.ಸುಕುಮಾರ ಗೌಡ ಅವರು ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article