
ಪೊಲೀಸ್ ಹುತಾತ್ಮರ ದಿನಾಚರಣೆ
Tuesday, October 21, 2025
ಮಂಗಳೂರು: ಪ್ರತಿ ವರ್ಷ ಅ.21 ರಂದು ಕರ್ತವ್ಯ ನಿರ್ವಹಣೆಯ ಸಮಯ ತಮ್ಮ ಪ್ರಾಣ ಕಳೆದುಕೊಂಡ ಪೊಲೀಸರ ಸ್ಮರಣಾರ್ಥ ಪೊಲೀಸ್ ಹುತಾತ್ಮ ದಿನವೆಂದು ಸ್ಮರಿಸಲಾಗುತ್ತಿದ್ದು, ಮಂಗಳೂರು ನಗರ ಪೊಲೀಸ್ ವತಿಯಿಂದಲೂ ಈ ದಿನ ಕಚೇರಿ ಆವರಣದಲ್ಲಿ ಪೊಲೀಸ್ ಹುತಾತ್ಮ ದಿನ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ್ ಮಾತನಾಡಿ, ನೊಂದವರ ಧ್ವನಿಯಾಗಿ ದಿನದ 24 ಗಂಟೆಯೂ ಸೇವೆ ಸಲ್ಲಿಸುವ ಇಲಾಖೆ ಪೊಲೀಸ್ ಇಲಾಖೆ. ಸಮಾಜದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸರು ಹಗಲು ಇರುಳು ಶ್ರಮಿಸುತ್ತಿದ್ದಾರೆ. 2001 ರಲ್ಲಿ ಸಂಸತ್ ಭವನದ ಮೇಲೆ ದಾಳಿಯಾದಾಗ, 2008ರಲ್ಲಿ ತಾಜ್ ಹೊಟೇಲ್ ಮೇಲೆ ದಾಳಿಯಾದಾಗ ಪೊಲೀಸರು ಉತ್ತಮ ಕರ್ತವ್ಯ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ, ಕೊರೊನಾ ಸಂದರ್ಭದಲ್ಲಿ ಪೊಲೀಸರು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದರು ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ 1-09-2024 ರಿಂದ 31-08-2025 ರ ಅವಧಿಯಲ್ಲಿ ಭಾರತದಲ್ಲಿ ಒಟ್ಟು 191 ಪೊಲೀಸರು ಹುತಾತ್ಮರಾಗಿದ್ದು, ಕರ್ನಾಟಕ ರಾಜ್ಯದಲ್ಲಿ 8 ಪೊಲೀಸರು ಹುತಾತ್ಮರಾಗಿದ್ದು, ಅವರನ್ನು ಸ್ಮರಿಸಿ ಗೌರವ ವಂದನೆ ಸಲ್ಲಿಸಲಾಯಿತು.
ಮಂಗಳೂರಿನ ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕ ಅಮಿತ್ ಸಿಂಗ್, ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ., ಅರಣ್ಯ ಇಲಾಖೆಯ ಸಿಸಿಎಫ್ ಕರಿಕಾಲನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ, ಕಿರಿಯ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಮತ್ತು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಗಳು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.