
ಆರ್‌ಎಸ್‌ಎಸ್ ಕೇವಲ ಸಂಘಟನೆಯಲ್ಲ, ಭೂಮಿಯೊಡನೆ ಬೆಸೆದುಕೊಂಡಿರುವ ರಾಷ್ಟ್ರಭಕ್ತಿಯ ಚಳವಳಿ
ಮಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎನ್ನುವುದು ಕೇವಲ ಸಂಘಟನೆಯಲ್ಲ, ಅದು ದೇಶದ ಭೂಮಿಯೊಡನೆ ಬೆಸೆದುಕೊಂಡಿರುವ ರಾಷ್ಟ್ರಭಕ್ತಿಯ ಚಳವಳಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಭಾನುವಾರ ಪುತ್ತೂರಿನಲ್ಲಿ ನಡೆದ ಅಶೋಕ ಜನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧ ಮಾಡಿಲ್ಲ, ಆದೇಶದಲ್ಲಿ ಯಾವುದೇ ಸಂಘ ಅಥವಾ ಸಂಸ್ಥೆಯ ಹೆಸರಿಲ್ಲ’ ಎಂಬ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರಪ್ರೇಮ, ಶಿಸ್ತು, ಸೇವಾಭಾವನೆ, ಮತ್ತು ಸಾಮಾಜಿಕ ಸೌಹಾರ್ದತೆಗಳ ಪಾಠವನ್ನು ನೀಡುವ, ನೂರು ವರ್ಷಗಳಿಂದ ದೇಶವನ್ನು ಏಕತೆಯ ಹಾದಿಯಲ್ಲಿ ನಡಿಸುತ್ತಿರುವ ಮಹಾನ್ ಸಂಸ್ಥೆ ಇದು. ಇಂತಹ ಸಂಸ್ಥೆಯ ಬಗ್ಗೆ ತಪ್ಪು ಅರ್ಥ ಸೃಷ್ಟಿಸಿ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಪ್ರಯತ್ನ ಮಾಡುವುದು, ಇದು ಬರೀ ರಾಜಕೀಯವಲ್ಲ, ಅದು ರಾಷ್ಟ್ರದ ಹಿತದ್ರೋಹ.
ಆರ್‌ಎಸ್‌ಎಸ್ ಎಂದರೆ ಶಿಸ್ತು, ತ್ಯಾಗ ಮತ್ತು ದೇಶಕ್ಕಾಗಿ ಬಾಳುವ ಮನೋಭಾವದ ಸಂಕೇತ. ಸ್ವಯಂ ಸೇವಕರು ಅಂದರೆ ಬಲಿದಾನದ ಪ್ರತೀಕ. ಈ ಸಂಸ್ಥೆ ಮತ, ಜಾತಿ, ಭಾಷಾ ಭೇದಗಳನ್ನು ಮೀರಿ ‘ನಾವು ಎಲ್ಲರೂ ಭಾರತೀಯರು’ ಎಂಬ ಭಾವನೆ ಬೆಳೆಸಿದೆ. ಇಂತಹ ಸಂಸ್ಥೆಯನ್ನು ರಾಜಕೀಯ ಅಸೂಯೆಯಿಂದ ಬಣ್ಣ ಹಚ್ಚುವುದು, ನಿಜವಾದ ರಾಷ್ಟ್ರಪ್ರೇಮಿಗಳ ಗೌರವಕ್ಕೆ ಧಕ್ಕೆಯುಂಟುಮಾಡುವುದು ಎಂದು ತಿಳಿಸಿದ್ದಾರೆ.
ಪ್ರತಿಯೊಂದು ಶಾಲೆಯಲ್ಲಿಯೂ, ಪ್ರತಿಯೊಂದು ಸಮಾಜದಲ್ಲಿಯೂ ಶಿಸ್ತು, ಸಂಸ್ಕಾರ ಮತ್ತು ಸೇವೆಯ ಬೀಜ ಬಿತ್ತುವ ಕೆಲಸ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡುತ್ತಿದೆ. ಅದನ್ನು ನಿಷೇಧಿಸುವ ವಿಚಾರ ಯೋಚನೆಯೇ ಹಾಸ್ಯಾಸ್ಪದ. ದೇಶಕ್ಕಾಗಿ ಕೆಲಸಮಾಡುವ ಸಂಸ್ಥೆಯನ್ನು ದುರುದ್ದೇಶದಿಂದ ಚಿತ್ರಿಸುವವರು ರಾಷ್ಟ್ರಭಕ್ತಿಯ ಅರ್ಥವೇ ಅರಿಯದವರು. ಈ ರೀತಿಯ ಹೇಳಿಕೆಗಳು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅಸಹನೆಯ ಮತ್ತು ಮತಾಂಧತೆಯ ಪ್ರತೀಕ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.