ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಗಫೂರ್ ಪದಗ್ರಹಣ

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಗಫೂರ್ ಪದಗ್ರಹಣ


ಮಂಗಳೂರು: ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಎಂ.ಎ. ಗಫೂರ್ ಅವರು ಸೋಮವಾರ ಕುದ್ಮುಲ್ ರಂಗರಾವ್ ಮಿನಿ ಪುರಭವನದಲ್ಲಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ರಾಜ್ಯ ಸರಕಾರವು ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಬದುಕಿನ ಅಭಿವೃದ್ಧಿಗೆ ಮೈಲುಗಲ್ಲು ಹಾಕಿದೆ. ಇದೇ ರೀತಿ ತಲಪಾಡಿಯಿಂದ ಕಾರವಾರದವರೆಗಿನ 350 ಕಿ.ಮೀ. ವ್ಯಾಪಿಯ ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿ ತನಗೆ ನೀಡಿರುವ ಜವಾಬ್ಧಾರಿಯನ್ನು ನಿಭಾಯಿಸುವುದಾಗಿ ಹೇಳಿದರು. 

ರಾಜ್ಯ ಸರಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಅಭಿವೃದ್ಧಿ ಮಂಡಳಿಯಾಗಿ ಶಾಸನ ಮಾಡಿ ಅಧಿಕಾರ ನೀಡಿದೆ. ಇದೀಗ ಅಗತ್ಯ ನೀತಿ ನಿಯಮಗಳ ಜಾರಿಯೊಂದಿಗೆ ಮಂಡಳಿ ಕಾರ್ಯ ನಿರ್ವಹಿಸಲಿದೆ. ಕರಾವಳಿ ಜಿಲ್ಲೆಗಳ ಹಿಂದಿನ ಎಲ್ಲಾ ಉಸ್ತುವಾರಿ ಸಚಿವರ ಜತೆಗೆ ಹಾಲಿ ಸಚಿವರ ಮಾರ್ಗದರ್ಶನ, ಸಲಹೆಯೊಂದಿಗೆ ಮಾಸ್ಟರ್ ಪ್ಲಾನ್ ರೂಪಿಸಿಕೊಂಡು ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು. 

ಸಚಿವ ಮಧು ಬಂಗಾರಪ್ಪ ಮಾತನಾಡಿ, 2023ರಲ್ಲಿ ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಿರುವ ತನಗೆ ಇದೀಗ ಪಂಚ ಗ್ಯಾರಂಟಿಗಳು ಅನುಷ್ಟಾನ ಆಗಿರುವ ಬಗ್ಗೆ ಹೆಮ್ಮೆ ಇದೆ. ಐದು ಗ್ಯಾರಂಟಿ ಯೋಜನೆಗಳಿಗೆ ಕಳೆದೆರಡು ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂ.ಗಳನ್ನು ಯಾವುದೇ ಕಮಿಷನ್ ಇಲ್ಲದೆ ಜನರಿಗೆ ಒದಗಿಸಲಾಗಿದೆ ಎಂದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಎಂ.ಎ. ಗಫೂರ್ ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಪಕ್ಷಗಳ ಟೀಕೆ ಟಿಪ್ಪಣಿಗಳ ಹೊರತಾಗಿಯೂ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸಿದೆ. ಕೇಂದ್ರ ಸರಕಾರವೂ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ್ನು ನಕಲು ಮಾಡಿದೆ. ಜಿಎಸ್ಟಿಯನ್ನೂ ಕಾಪಿ ಮಾಡಿದೆ. ನಕಲು ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಲೇವೆಡಿ ಮಾಡಿದರು.

ಮಹಾತ್ಮ ಗಾಂಧಿಯನ್ನು ಮರೆಯುತ್ತಿರುವ, ಅಪಪ್ರಚಾರ ಮಾಡುತ್ತಿರುವ ಇಂದಿನ ಸನ್ನಿವೇಶದಲ್ಲಿ ರಾಜ್ಯದಲ್ಲಿ ಗಾಂಧಿ ನೆನಪು ಶಾಶ್ವತವಾಗಿಸಲು 10.5 ಕೋಟಿ ಪಠ್ಯ ಪುಸ್ತಕಗಳಲ್ಲಿ ಮಹಾತ್ಮಗಾಂಧಿಯವರ ಫೋಟೋ, ಸಂವಿಧಾನ ಪೀಠಿಕಯನ್ನು ಅಚ್ಚು ಹಾಕಿಸಲಾಗಿದೆ. ಈ ಮೂಲಕ ಗಾಂಧಿಯನ್ನು ವಿರೋಧಿಸುವವರ ಮನೆಯಲ್ಲಿಯೂ ಗಾಂಧಿಯನ್ನು ನೆನಪಿಸುವ ಕಾರ್ಯ ಶಿಕ್ಷಣ ಇಲಾಖೆಯ ಮೂಲಕ ರಾಜ್ಯ ಸರಕಾರ ಮಾಡಿದೆ ಎಂದರು.

ಕರಾವಳಿ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಡಿಸೋಜಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. 

ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾಜಿ ಶಾಸಕ ಜೆ.ಆರ್. ಲೋಬೋ, ಮುಖಂಡರಾದ ಜಯಪ್ರಕಾಶ್ ಹೆಗ್ಡೆ, ಪದ್ಮರಾಜ್, ಚೇತನ್ ಬೆಂಗ್ರೆ, ಶಾಲೆಟ್ ಪಿಂಟೋ, ಲಾವಣ್ಯ ಬಳ್ಳಾಲ್, ಪ್ರತಿಭಾ ಕುಳಾಯಿ, ಟಿ.ಎಂ. ಶಾಹೀದ್, ವಿಶ್ವಾಸ್ ಕುಮಾರ್ ದಾಸ್, ಅಶೋಕ್ ಕೊಡವೂರು, ಮಂಜುನಾಥ್, ಪ್ರಸಾದ್ ಕಾಂಚನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article