ಕುಡಿದು ಕಾರು ಚಲಾವಣೆ: ಕಾರಿನ ಗ್ಲಾಸ್ ಒಡೆದ ವಿಡಿಯೋ ವೈರೆಲ್
ಅ.2 ರಂದು ರಾತ್ರಿ ಕುದ್ರೋಳಿ ದಸರಾ ಮೆರವಣಿಗೆಯಿದ್ದ ಸಂದರ್ಭದಲ್ಲಿ ನಂತೂರಿನಲ್ಲಿ ತಡರಾತ್ರಿ ಘಟನೆ ನಡೆದಿದೆ. ಪಂಪ್‌ವೆಲ್ ಕಡೆಯಿಂದ ಬಂದಿದ್ದ ಕಾರನ್ನು ಅಲ್ಲಿದ್ದ ಪೊಲೀಸ್ ಸಿಬಂದಿ ನಿಲ್ಲಿಸಲು ಸೂಚಿಸಿದ್ದು, ನಿಲ್ಲಿಸದೇ ಇದ್ದಾಗ ಕಾರಿನ ಹಿಂಬದಿಗೆ ಕೈಯಲ್ಲಿ ಬಡಿದಿದ್ದಾರೆ. ಈ ವೇಳೆ, ಕಾರಿನ ಹಿಂಬದಿಯ ಗ್ಲಾಸ್ ಒಡೆದಿದ್ದು, ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಪೊಲೀಸರನ್ನು ತರಾಟೆಗೆತ್ತಿಕೊಂಡಿದ್ದಾರೆ. ಅಲ್ಲಿದ್ದ ಒಬ್ಬರು ಮೊಬೈಲಿನಲ್ಲಿ ವಿಡಿಯೋ ಮಾಡಿದ್ದು, ಪೊಲೀಸರಿಗೆ ಪ್ರಶ್ನೆ ಮಾಡುವ ವಿಡಿಯೋ ಇದೆ.
ವಿಡಿಯೋ ವೈರಲ್ ಆಗುತ್ತಲೇ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದು, ಘಟನೆ ಹಿನ್ನೆಲೆಯಲ್ಲಿ ಕದ್ರಿ ಸಂಚಾರಿ ಠಾಣೆಯಲ್ಲಿ ಡ್ರಂಕ್ ಆಂಡ್ ಡ್ರೈವ್ ಕೇಸು ದಾಖಲಾಗಿದೆ. ಅಲ್ಲದೆ, ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಶಿವಪ್ರಸಾದ್ ಎಂಬವನಾಗಿದ್ದು, ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ. ಅಲ್ಲದೆ, ಬರ್ಕೆ ಠಾಣೆಯಲ್ಲಿ ರೌಡಿಶೀಟರ್ ಹೊಂದಿದ್ದಾನೆ.
ಪೊಲೀಸರು ಕರ್ತವ್ಯ ಲೋಪ ಮಾಡಿದ್ದಾರೆಂದು ಬಿಂಬಿಸಿ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಮಾಡುವುದು ರೌಡಿಯೊಬ್ಬನಿಗೆ ಸಪೋರ್ಟ್ ಮಾಡಿದಂತಾಗುತ್ತದೆ. ಆ ಬಗ್ಗೆ ಪೊಲೀಸರಿಗೆ ವಿವರಣೆ ಕೊಡಬೇಕಾಗುತ್ತದೆ. ಈ ಘಟನೆ ಹೇಗಾಗಿದೆ ಎನ್ನುವುದು ತಿಳಿಯಬೇಕಷ್ಟೆ. ಆದರೆ ಕುಡಿದು ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ತಡೆದ ಪೊಲೀಸ್ ಸಿಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ. ಪೊಲೀಸರ ವಿರುದ್ಧ ಅನ್ನುವ ಕಾರಣಕ್ಕೆ ತಾವೇ ನ್ಯಾಯ ತೀರ್ಮಾನ ಮಾಡಿಕೊಂಡು ವಿಡಿಯೋ ವೈರಲ್ ಮಾಡುವುದು ಸರಿ ಎನಿಸುವುದಿಲ್ಲ ಎಂದಿದ್ದಾರೆ.
ತಡರಾತ್ರಿ ವೇಳೆ ಮೆರವಣಿಗೆ ನೋಡಿ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆಯಾಗಿದ್ದು, ಶಿವಪ್ರಸಾದ್ ಆಪ್ತರು ಸೇರಿ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದು ವಿಡಿಯೋದಲ್ಲಿದೆ. ಏನ್ ರೌಡಿಸಂ ಮಾಡುತ್ತಿದ್ದೀರಾ, ಗಾಡಿಗೆ ಒಡೆದಿದ್ದು ಯಾಕೆ. ತಪ್ಪಾಗಿದ್ದರೆ ಕೇಸ್ ಹಾಕಿ, ಅದು ಬಿಟ್ಟು ಗಾಡಿಗೆ ಒಡೆದು ಗ್ಲಾಸ್ ಪುಡಿ ಮಾಡಿದ್ದು ಯಾಕೆಂದು ಜನರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಕದ್ರಿ ಸಂಚಾರಿ ವಿಭಾಗದ ಪೊಲೀಸರಲ್ಲಿ ಕೇಳಿದಾಗ, ಅದು ಗ್ಲಾಸ್ ಒಡೆದಿದ್ದು ಹೇಗೆಂದು ತಿಳಿಯುತ್ತಿಲ್ಲ. ಬಿರುಕು ಬಿಟ್ಟಿತ್ತೋ ಏನೋ.. ಕೈಯಲ್ಲಿ ಒಡೆದಾಗ ಹಾಗೆಲ್ಲ ಗಾಜು ಒಡೆದು ಹೋಗುವುದಿಲ್ಲ ಎಂದಿದ್ದಾರೆ.