ಬರಹಗಳ ಮೂಲಕ ಕಾರಂತರು ಇಂದಿಗೂ ಜೀವಂತ: ಬಸವರಾಜ ಹೊರಟ್ಟಿ

ಬರಹಗಳ ಮೂಲಕ ಕಾರಂತರು ಇಂದಿಗೂ ಜೀವಂತ: ಬಸವರಾಜ ಹೊರಟ್ಟಿ


ಮಂಗಳೂರು: ಕಾರಂತರು ಅವರ ಬರಹಗಳ ಮೂಲಕ ಇಂದಿಗೂ ಬದುಕಿದ್ದಾರೆ. ಕಾರಂತ ಪ್ರಶಸ್ತಿಗೆ ಯಾವುದೇ ಪ್ರಶಸ್ತಿ ಸಮವಲ್ಲ. ರಾಜ್ಯ, ರಾಷ್ಟ್ರ ಪ್ರಶಸ್ತಿಗಳಿಗೆ ನಡೆಯುತ್ತಿರುವ ಲಾಬಿ, ಒತ್ತಡ ಗಮನಿಸಿದಾಗ ಪ್ರಶಸ್ತಿಗಳು ಮೌಲ್ಯ ಕಳೆದುಕೊಂಡಿವೆ ಅನಿಸುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ವತಿಯಿಂದ ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಅಂಗವಾಗಿ ಮಂಗಳೂರಿನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ‘ಕಾರಂತ ಪ್ರಶಸ್ತಿ-2025’ ಸ್ವೀಕರಿಸಿ ಅವರು ಮಾತನಾಡಿದರು.

ಶ್ರೇಷ್ಠ ಸಾಹಿತಿ ಕೋಟ ಶಿವರಾಮ ಕಾರಂತ ಅವರ ಹೆಸರಿನಲ್ಲಿ ಪ್ರಶಸ್ತಿ ದೊರೆತಿರುವುದು ಖುಷಿ ತಂದಿದೆ. ಕಾರಂತ ಪ್ರಶಸ್ತಿಯನ್ನು ಅಭಿಮಾನದಿಂದ ಸ್ವೀಕರಿಸುತ್ತಿದ್ದೇನೆ. ನೇರ ಮಾತು, ನಿಷ್ಠುರ ನಡವಳಿಕೆ ಮೂಲಕ ಕಾರಂತರು ಬದುಕಿದ್ದರು. ಕಲ್ಕೂರ ಪ್ರತಿಷ್ಠಾನ ಶಿವರಾಮ ಕಾರಂತರ ನೆನೆಪಿನ ಕಾರ್ಯಕ್ರಮ ಆಯೋಜಿಸುವ ಮೂಲಕ ದೊಡ್ಡ ಸೇವೆ ಮಾಡುತ್ತಿದೆ ಎಂದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ, ಬಸವರಾಜ ಹೊರಟ್ಟಿ ಅವರ ಐದು ದಶಕಗಳ ಪ್ರಾಮಾಣಿಕ, ಯಾವುದೇ ಕಪ್ಪುಚುಕ್ಕೆ ಇಲ್ಲದ ರಾಜಕೀಯ ಜೀವನ ಮಾದರಿಯಾಗಿದೆ. ನಡೆ-ನುಡಿಯಲ್ಲಿ ಅವರು ಮೌಲ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ ಕಾರಂತರ ಹೆಸರಿನ ಪ್ರಶಸ್ತಿ ಶಿಕ್ಷಣ ಕ್ಷೇತ್ರದ ಜನಪ್ರತಿನಿಧಿ ಹೊರಟ್ಟಿ ಅವರಿಗೆ ಸಲ್ಲುತ್ತಿರುವುದು ಔಚಿತ್ಯಪೂರ್ಣ ಎಂದರು.

ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕಾರಂತ ಹುಟ್ಟುಹಬ್ಬ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಬಹುಮಾನ ವಿತರಿಸಿದರು. ಅಂಚೆ ಕಾರ್ಡಿನಲ್ಲಿ ಕಾರಂತರ ಚಿತ್ರರಚನಾ ಸ್ಪರ್ಧೆಯ ವಿಜೇತರಿಗೆ ಸಂತ ಅಲೋಶಿಯಸ್ ಪ್ರೌಢಶಾಲಾ ಪ್ರಾಂಶುಪಾಲ ಫಾ. ಜಾನ್ಸನ್ ಪಿಂಟೊ ಬಹುಮಾನ ವಿತರಿಸಿದರು.

ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ಕಸಾಪ ಮಾಜಿ ರಾಜಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಲಯ ಸಮೂಹದ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಅಂತಾರಾಷ್ಟ್ರೀಯ ಖ್ಯಾತಿಯ ಕೇಶ ವಿನ್ಯಾಸಗಾರ ಡಾ. ಶಿವರಾಮ ಕೆ. ಭಂಡಾರಿ, ಹಿರಿಯ ಸಾಹಿತಿ ಡಾ. ಲೀಲಾ ಉಪಾಧ್ಯಾಯ, ಪ್ರಮುಖರಾದ ಜಿ.ಕೆ. ಭಟ್ ಸೇರಾಜೆ, ಜನಾರ್ದನ ಹಂದೆ, ಸುಧಾಕರ ರಾವ್ ಪೇಜಾವರ ಮತ್ತಿತರರು ಉಪಸ್ಥಿತರಿದ್ದರು.

ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ, ಮಂಜುಳಾ ಶೆಟ್ಟಿ ನಿರೂಪಿಸಿದರು. ಇತ್ತೀಚೆಗೆ ನಿಧನರಾದ ಪತ್ತುಮುಡಿ ಸೂರ್ಯನಾರಾಯಣ ರಾವ್ ಸಂಸ್ಮರಣೆಯೊಂದಿಗೆ ಕಾರ್ಯಕ್ರಮ ನಡೆಯಿತು.


ಕನ್ನಡ ಶಾಲೆ ಮುಚ್ಚಲು ಸರ್ಕಾರ ಕಾರಣವಲ್ಲ:

ರಾಜ್ಯದಲ್ಲಿ ಕನ್ನಡ ಶಾಲೆ ಮುಚ್ಚಲು ಕೇವಲ ಸರ್ಕಾರ ಕಾರಣವಲ್ಲ. ಆದರೆ ಖಾಸಗಿ ಶಾಲೆ ಆರಂಭಿಸಲು ಅನುಮತಿ ಸಹಿತ ಸರ್ಕಾರದ ಕೆಲ ತೀರ್ಮಾನಗಳಿಂದ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕೇರಳದಲ್ಲಿ ಒಂದು ತರಗತಿಗೆ ಒಬ್ಬ ಶಿಕ್ಷಕರಿದ್ದರೆ ನಮ್ಮ ಶಾಲೆಗಳಲ್ಲಿ ಐದು ತರಗತಿಗೆ ಒಬ್ಬ ಶಿಕ್ಷಕರಿದ್ದಾರೆ. ರಾಜ್ಯದಲ್ಲಿ 29 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ. 1900 ಸರ್ಕಾರಿ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಸಂಖ್ಯೆಯ ಮಕ್ಕಳಿದ್ದಾರೆ. ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸುವುದು ಎಲ್ಲರ ಕರ್ತವ್ಯ ಎಂದು ಬಸವರಾಜ ಹೊರಟ್ಟಿ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article