ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ
Monday, October 27, 2025
ಮಂಗಳೂರು: ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ಅ.26 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆಯಿತು.
ಮಂಗಳೂರು ಆಕ್ಸಿಸ್ ಬ್ಯಾಂಕ್‌ನ ಹಿರಿಯ ಉಪಾಧ್ಯಕ್ಷ ಶಾಮ್ ಭಟ್ ಅವರು ಧ್ವಜಾರೋಹಣ ಮಾಡುವ ಮೂಲಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯು ಕೇವಲ ದೈಹಿಕ ಸದೃಢತೆಗೆ ಮಾತ್ರವಲ್ಲ ಅದು ಮಾನಸಿಕ ಯೋಗಕ್ಷೇಮಕ್ಕೂ ಅತ್ಯಗತ್ಯ ಎಂದರು.
ಜೀವನದಲ್ಲಿ ಶೈಕ್ಷಣಿಕ ಕ್ಷೇತ್ರ ಮತ್ತು ಕ್ರೀಡಾ ಕ್ಷೇತ್ರವನ್ನು ವಿದ್ಯಾರ್ಥಿಗಳು ಸಮಾನಾಂತರವಾಗಿ ಕಾಯ್ದುಕೊಳ್ಳುವ ಮೂಲಕ ಯಶಸ್ಸನ್ನು ಗಳಿಸಬೇಕೆಂದರು. ಯಾವುದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲು ಮುಖ್ಯವಾಗಿ ನಮಗೆ 3‘ಡಿ’ಗಳು ಬಹಳ ಮುಖ್ಯ. ಅಂದರೆ ಶಿಸ್ತು, ಸಮರ್ಪಣೆ, ದೃಢನಿಶ್ಚಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾಧ್ಯವೆಂದರು.
ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾರತದ ನೆಟ್‌ಬಾಲ್ ತಂಡದ ಮಾಜಿ ಉಪನಾಯಕ ನಿತಿನ್ ಪೂಜಾರಿ ಭಾಗವಹಿಸಿ ಮಾತನಾಡಿ, ಕ್ರೀಡೆಯು ನನಗೆ ಮನ್ನಣೆಯನ್ನು ನೀಡಿದೆ. ಅಂತರಾಷ್ಟ್ರೀಯಮಟ್ಟದಲ್ಲಿ ಗುರುತಿಸಿಕೊಳ್ಳಲು ಕ್ರೀಡೆಯು ನನಗೆ ಅವಕಾಶವನ್ನು ನೀಡಿದೆ, ಅದರ ಅನುಭವವು ಮರೆಯಲಾಗದ ಕ್ಷಣವಾಗಿದ್ದು ಬದುಕಿನಲ್ಲಿ ದೊಡ್ಡ ಮಟ್ಟಕ್ಕೇರಲು ಕ್ರೀಡೆಯು ಸಹಕಾರ ಆಗುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.
ಹುಡುಗರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್‌ಆಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರತುಲ್ ಡಿಆರ್ ಮತ್ತು ಹುಡುಗಿಯರ ವಿಭಾಗದಲ್ಲಿ ಅಭಿಷ್ಟಾ ಪ್ರಶಸ್ತಿಯನ್ನು ಪಡೆದುಕೊಂಡರು. ಸಮಗ್ರ ಪ್ರಶಸ್ತಿಯನ್ನು ದ್ವಿತೀಯ ಪಿಯುಸಿ ವಿಭಾಗದ ಬಿ2 ವಿಭಾಗದ ವಿದ್ಯಾರ್ಥಿಗಳು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್ ನಾಯಕ್, ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್. ನಾಯಕ್, ಯೋಗರತ್ನ ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್, ಕ್ರೀಡಾ ಸಂಯೋಜಕ ಪ್ರಮೋದ್ ಕಿಣಿ ಮತ್ತಿತರರು ಉಪಸ್ಥಿತರಿದ್ಧರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಪಥ ಸಂಚಲನ ಸೇರಿದಂತೆ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಇಂಗ್ಲೀಷ್ ವಿಭಾಗದ ಉಪನ್ಯಾಸಕರಾದ ಶ್ವೇತಾ ಸುವರ್ಣ ಮತ್ತು ಲತಾ ಶೆಣೈ ನಿರೂಪಿಸಿದರು. ಕ್ರೀಡಾ ಸಂಯೋಜಕ ಪ್ರಮೋದ್ ಕಿಣಿ ವಂದಿಸಿದರು.






