ಚೂರಿ ಇರಿತದ ಆರೋಪಿಯಿಂದ ಪೊಲೀಸ್‌ಗೆ ಹಲ್ಲೆ
ಮಂಗಳೂರು: ಸುರತ್ಕಲ್‌ನ ಚೂರಿ ಇರಿತ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಗುರುರಾಜ್ ಆಚಾರ್ಯ (29) ವಿರುದ್ಧ ಪೊಲೀಸ್ ಸಿಬಂದಿಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೂರಿ ಇರಿತ ಪ್ರಕರಣದ ಬಳಿಕ ತಲೆ ಮರೆಸಿಕೊಂಡಿದ್ದ ಗುರುರಾಜ್ ಆಚಾರ್ಯನ ಪತ್ತೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾಗ ಆತ ಕುಳ್ರಾ ಗುಡ್ಡೆ ಪ್ರಗತಿ ನಗರದ ಬಳಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಸುರತ್ಕಲ್ ಠಾಣೆಯ ಪಿಎಸ್‌ಐ ಸುದೀಪ್ ಎಂ.ವಿ. ಅವರು ಸಿಬಂದಿಯೊಂದಿಗೆ ಆರೋಪಿ ಅಲ್ಲಿಗೆ ದಾಳಿ ನಡೆಸಿದ್ದು, ವೇಳೆ ಪ್ರಗತಿ ನಗರದ ಬಳಿ ಮಣ್ಣು ರಸ್ತೆಯಲ್ಲಿ ಮರವೊಂದರ ಕೆಳಗೆ ಅಡಗಿ ಕುಳಿತಿರುವುದು ಕಂಡು ಬಂದಿದೆ. ಅದು ಗುರುರಾಜ್ ಎಂದು ಖಚಿತಪಡಿಸಿಕೊಂಡು ಆತನನ್ನು ಹಿಡಿಯಲು ಹತ್ತಿರ ಹೋದಾಗ ತಪ್ಪಿಸಿಕೊಳ್ಳುವ ಸಲುವಾಗಿ ಸ್ವಲ್ಪ ದೂರ ಓಡಿದ್ದಾನೆ. ಪಿಸಿ ವಿನಾಯಕ ಅವರು ಓಡಿಹೋಗಿ ಆತನನ್ನು ಹಿಡಿದುಕೊಳ್ಳಲು ಹೋದಾಗ ಆತ ನೆಲದ ಮೇಲೆ ಬಿದ್ದಿದ್ದ ಒಂದು ಮರದ ದೊಣ್ಣೆ ಕೈಯಲ್ಲಿ ತೆಗೆದುಕೊಂಡಿದ್ದಾನೆ.
ನಾವು ಪೊಲೀಸರು ನಿನ್ನನ್ನು ದಸ್ತಗಿರಿ ಮಾಡಲು ಬಂದಿದ್ದೇವೆ ಎಂದು ಹೇಳಿ ಐಡಿ ಕಾರ್ಡ್ ಅನ್ನು ತೋರಿಸಿದರೂ ಕೇಳದೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ದೊಣ್ಣೆಯಿಂದ ವಿನಾಯಕ ಅವರ ಎಡಭುಜಕ್ಕೆ ಜೋರಾಗಿ ಹೊಡೆದಿದ್ದಾನೆ. ಬಳಿಕ ಕಾಲಿನಿಂದ ಒದ್ದು ಕೆಳಗೆ ಬೀಳಿಸಿ ಅಲ್ಲಿಂದ ಓಡಿ ಹೋಗಿದ್ದಾನೆ. ಅನಂತರ ಪಿಎಸ್‌ಐ ಮತ್ತು ಉಳಿದ ಸಿಬಂದಿ ಆತನ್ನನು ಬೆನ್ನಟ್ಟಿ ಹಿಡಿದಿದ್ದಾರೆ. ಪೊಲೀಸರಿಗೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.