‘ಮಾನವ ಪ್ರಾಬಲ್ಯದ ಭೂದೃಶ್ಯದಲ್ಲಿ ವನ್ಯಜೀವಿ ಸಂರಕ್ಷಣೆ’: ಕಾರ್ಯಗಾರ

‘ಮಾನವ ಪ್ರಾಬಲ್ಯದ ಭೂದೃಶ್ಯದಲ್ಲಿ ವನ್ಯಜೀವಿ ಸಂರಕ್ಷಣೆ’: ಕಾರ್ಯಗಾರ


ಮಂಗಳೂರು: ಭಾರತೀಯ ಕಲೆ ಮತ್ತು ಪರಂಪರೆ ಸಂಸ್ಥೆಯಾದ ಇಂಟಾಕ್‌ನ ಮಂಗಳೂರು ಘಟಕವು ಮಾನವ ಪ್ರಾಬಲ್ಯದ ಭೂದೃಶ್ಯದಲ್ಲಿ ವನ್ಯಜೀವಿ ಸಂರಕ್ಷಣೆ ಕುರಿತು ವನ್ಯಜೀವಿ ಸಂರಕ್ಷಣಾವಾದಿ ಪ್ರವೀಣ್ ಭಾರ್ಗವ್‌ರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಇತ್ತೀಚೆಗೆ ನಗರದ ಕೊಡಿಯಾಲ್‌ಗುತ್ತು ಕಲಾಕೇಂದ್ರದಲ್ಲಿ ಆಯೋಜಿಸಿತ್ತು.

ದೇಶದ ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಯ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಮಾತನಾಡಿದ ಪ್ರವೀಣ್ ಭಾರ್ಗವ್ ಭಾರತದಲ್ಲಿ ಸುಮಾರು 4 ಲಕ್ಷ ಚದರ ಕಿ.ಮೀ. ಭೂಭಾಗ ಅಂದರೆ ದೇಶದ ಸುಮಾರು ಶೇ.12 ಪ್ರದೇಶ, ದಟ್ಟ ಅಥವಾ ಮಧ್ಯಮ ದಟ್ಟತೆಯ ಅರಣ್ಯಗಳನ್ನು ಹೊಂದಿವೆ. ಇದರಲ್ಲಿ ಕೇವಲ 1.67 ಲಕ್ಷ ಚದರ ಕಿ.ಮೀ. ಅಂದರೆ ಶೇ.4 ಭಾಗ ಮಾತ್ರ ವನ್ಯಜೀವಿಗಳಿಗೆ ಮೀಸಲಾದ ಸಂರಕ್ಷಿತ ಪ್ರದೇಶಗಳಾಗಿವೆ ಎಂದು ಹೇಳಿದರು. 

ಪ್ರಮುಖ ವನ್ಯಜೀವಿಗಳ ಸಂಖ್ಯೆಯ ಬಗ್ಗೆ ಮಾಹಿತಿ ನೀಡಿದ ಅವರು ಭಾರತದಲ್ಲಿ ಪ್ರಸಕ್ತ ಸುಮಾರು 2,500ರಿಂದ 2,900 ಹುಲಿಗಳು, 3,000ರಿಂದ 4,000 ಸಿಂಗಳೀಕ ಕೋತಿಗಳು, 300ರಿಂದ 400 ಸಿಂಹಗಳು, 25,000ರಿಂದ 27,000 ಆನೆಗಳು ಇವೆ ಎಂದರು.

ಅರಣ್ಯ ಪ್ರದೇಶಗಳ ವಿಭಜನೆಯೇ ಸಂರಕ್ಷಣೆಗೆ ಅತಿದೊಡ್ಡ ಅಡಚಣೆಯಾಗಿದೆ.ಕಾನೂನು ರೂಪಿಸುವುದಕ್ಕಿಂತ ಅರಣ್ಯ ವಿಭಜನೆಯನ್ನು ತಡೆಯುವ ಅಗತ್ಯವಿದೆ. ಪಶ್ಚಿಮ ಘಟ್ಟಗಳಾದ್ಯಂತ ಅಡ್ಡವಾಗಿ ಕತ್ತರಿಸುವ ಬೃಹತ್ ಮೂಲಸೌಕರ್ಯ ಯೋಜನೆಗಳು ಕಾಡುಪ್ರಾಣಿಗಳ ವಾಸ ಸ್ಥಳಗಳಿಗೆ ಭಾರೀ ಹಾನಿ ಮಾಡಿವೆ. ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಸಮರ್ಪಕವಾಗಿ ಬಳಸಿದಲ್ಲಿ ಪರಿಸರ ಮತ್ತು ಆರ್ಥಿಕತೆಗೆ ಲಾಭವಾಗುತ್ತದೆ. ಇದು ಅಭಿವೃದ್ಧಿಗೆ ವಿರೋಧವಲ್ಲ. ಸಮತೋಲಿತ ಪರಿಹಾರಗಳನ್ನು ಕಂಡು ಹಿಡಿಯುವ ವಿಚಾರವಾಗಿದೆ ಎಂದು ಪ್ರವೀಣ್ ಭಾರ್ಗವ್ ಹೇಳಿದರು.

ಅಕ್ರಮ ವನ್ಯಜೀವಿ ದಂಧೆಯು ಮಾದಕ ವಸ್ತುಗಳ ದಂಧೆಯ ನಂತರದ ಅತಿದೊಡ್ಡ ಅಕ್ರಮ ವ್ಯವಹಾರವಾಗಿದೆ. ಇದನ್ನು ನಿಯಂತ್ರಿಸಲು ವಿಶಿಷ್ಟ ಕಾರ್ಯಪಡೆಯ ಅಗತ್ಯವಿದೆ. ವಿಪರ್ಯಾಸವೆಂದರೆ ನೈಸರ್ಗಿಕ ಸಂಪತ್ತು ಮತ್ತು ಜೀವನಾಡಿಯಾಗಿರುವ ನದಿಗಳನ್ನು ರಕ್ಷಿಸಲು ಭಾರತದಲ್ಲಿ ನಿರ್ದಿಷ್ಟವಾದ ಯಾವುದೇ ಕಾನೂನು ಇಲ್ಲ. ಕೇವಲ ಮರಗಳನ್ನು ರಕ್ಷಿಸುವುದನ್ನು ಬಿಟ್ಟು, ಸಮಗ್ರ ಸಂರಕ್ಷಣಾ ಮಾದರಿಯ ದೃಷ್ಟ್ಟಿಕೋನದಿಂದ ವನ್ಯಜೀವಿ ಸಂರಕ್ಷಣೆಯನ್ನು ನೋಡಬೇಕಾಗಿದೆ ಎಂದು ಪ್ರವೀಣ್ ಭಾರ್ಗವ್ ಹೇಳಿದರು.

ಈ ಸಂದರ್ಭದಲ್ಲಿ ಇಂಟಾಕ್ ಮಂಗಳೂರು ಘಟಕದ ಸಂಚಾಲಕ ಸುಭಾಸ್ ಬಸು, ಸಹ-ಸಂಚಾಲಕ ನಿರೇನ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article