ಧರ್ಮಸ್ಥಳ ಪ್ರಕರಣ: ತಿಮರೋಡಿ, ಮಟ್ಟಣ್ಣನವರ್ ಸಹಿತ ನಾಲ್ವರಿಗೆ ಎಸ್‌ಐಟಿ ವಿಚಾರಣೆಗೆ ನೋಟಿಸ್-ತಪ್ಪಿದ್ದಲ್ಲಿ ಬಂಧನ
ಅ.24ರಂದು ನೋಟಿಸ್ ಜಾರಿ ಮಾಡಿರುವ ತನಿಖಾಧಿಕಾರಿ ಜಿತೇಂದ್ರ ದಯಾಮ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ತಪ್ಪಿದಲ್ಲಿ ಬಂಧನದ ಎಚ್ಚರಿಕೆ ನೀಡಿದ್ದಾರೆ.
ವಿಚಾರಣೆಗೆ ಹಾಜರಾಗದಿದ್ದಲ್ಲಿ ಃಓS 35(3) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ನೋಟೀಸ್ ನಲ್ಲಿ ತಿಳಿಸಲಾಗಿದೆ.
ಸಾಕ್ಷಿ ದೂರು ದಾರನಾಗಿ ಬಂದ ಚಿನ್ನಯ್ಯ ತಂದಿದ್ದ ಬುರುಡೆಗೆ ಸಂಬಂಧಿಸಿದಂತೆ ಇವರ ವಿಚಾರಣೆ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು ಇದೀಗ ಮತ್ತೆ ಹಾಜರಾಗಲು ತಿಳಿಸಿದ್ದಾರೆ. ಬುರುಡೆಗೆ ಸಂಬಂಧಿಸಿದಂತೆ ಇವರ ವಿಚಾರಣೆ ಹಾಗೂ ಚಿನ್ನಯ್ಯ ನೀಡಿದ ಹೇಳಿಕೆಗಳ ಕುರಿತು ತನಿಖೆ ನಡೆಸುವ ಬಗ್ಗೆ ಎಸ್‌ಐಟಿ ಮಹತ್ವದ ನಿರ್ಧಾರಗಳನ್ನು ತೆಗದುಕೊಳ್ಳುವ ನಿರೀಕ್ಷೆಯಿದೆ.
ಸೋಮವಾರ ಸೌಜನ್ಯ ಪರ ಹೋರಾಟಗಾರರು ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದು ಇದೇ ದಿನ ಇವರಿಗೆ ಹಾಜರಾಗುವಂತೆ ನೋಟೀಸ್ ನೀಡಿರುವುದು ಕುತೂಹಲ ಮೂಡಿಸಿದೆ.
ಮೊಹಂತಿ ಭೇಟಿ..
ಎಸ್‌ಐಟಿ ತನಿಖೆ ಮಹತ್ವದ ಹಂತ ತಲುಪಿದ್ದು, ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರು ಬೆಳ್ತಂಗಡಿ ಕಚೇರಿಗೆ ಶನಿವಾರ ಮಧ್ಯಾಹ್ನ ಆಗಮಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ನಡೆಯುತ್ತಿರುವ ಎಸ್‌ಐಟಿ ತನಿಖೆ ಇದೀಗ ಮಹತ್ವದ ಹಂತಕ್ಕೆ ತಲುಪಿದೆ. ಚಿನ್ನಯ್ಯ ತಂದಿದ್ದ ತಲೆಬುರುಡೆಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದ್ದು, ಇದರಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಎಸ್‌ಐಟಿ ತಂಡ ಅಂತಿಮ ನಿರ್ಧಾರಕ್ಕೆ ಬಂದಿದ್ದು, ಈ ಬಗ್ಗೆ ಮಹತ್ವದ ಸಭೆಗಳು ಎಸ್‌ಐಟಿ ಕಚೇರಿಯಲ್ಲಿ ಇಂದು ಮತ್ತು ನಾಳೆ ನಡೆಯಲಿದೆ. ಎಸ್‌ಐಟಿ ತನಿಖೆಯಲ್ಲಿ ಮುಂದಿನ ವಾರ ಅತ್ಯಂತ ಮಹತ್ವದ ಬೆಳವಣಿಗೆಗಳು ನಡೆಯುವ ನಿರೀಕ್ಷೆಯಿದೆ.