‘ಟೆಕ್ನಾಲಜಿ ಪಾರ್ಕ್’ ಶೀಘ್ರ ಕಾರ್ಯಗತ: ದಿನೇಶ್ ಗುಂಡೂರಾವ್

‘ಟೆಕ್ನಾಲಜಿ ಪಾರ್ಕ್’ ಶೀಘ್ರ ಕಾರ್ಯಗತ: ದಿನೇಶ್ ಗುಂಡೂರಾವ್


ಮಂಗಳೂರು: ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ವಾಣಿಜ್ಯ ಹಬ್ ಆಗುವ ಪೂರ್ಣ ಸಾಮರ್ಥ್ಯ ಮಂಗಳೂರಿಗೆ ಇದೆ. ಅಲ್ಲದೆ ಹೂಡಿಕೆದಾರರು ಕೂಡ ಮಂಗಳೂರನ್ನು ಗುರುತಿಸಿದ್ದಾರೆ. ಅದಕ್ಕೆ ಪೂರಕವಾಗಿ ರಾಜ್ಯ ಸರಕಾರವು ಮಂಗಳೂರಿಗೆ 15 ಕೋ.ರೂ. ವೆಚ್ಚದಲ್ಲಿ ಟೆಕ್ನಾಲಜಿ ಪಾರ್ಕ್ ಮಂಜೂರು ಮಾಡಿದೆ. ಅದನ್ನು ಶೀಘ್ರ ಕಾರ್ಯಗತಗೊಳಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.

ನಗರದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ)ಯ ವತಿಯಿಂದ ಚೇಂಬರ್ಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಮಂಗಳೂರಿನ ವಿಶಿಷ್ಟ ಸಂಸ್ಕೃತಿ, ಆಹಾರ-ವಿಹಾರ, ಪರಂಪರೆ, ಜನಜೀವನ ಎಲ್ಲವೂ ಆಕರ್ಷಿಸುವಂತಿದೆ. ಹಾಗಾಗಿ ಮಂಗಳೂರನ್ನು ಜಾಗತಿಕ ನಗರವನ್ನಾಗಿ ರೂಪಿಸಬೇಕಿದೆ. ಸಾಕಷ್ಟು ಅವಕಾಶಗಳಿದ್ದರೂ ಈವರೆಗೆ ಅದರ ಸಮರ್ಪಕ ಬಳಕೆ ಆಗಿಲ್ಲ. ಪ್ರವಾಸೋದ್ಯಮ, ಮೂಲಸೌಕರ್ಯಗಳನ್ನು ಮತ್ತಷ್ಟು ಸುಧಾರಿಸಬೇಕಿದೆ ಎಂದರು. 

ಮಂಗಳೂರಿನ ಸಮಗ್ರ ಯೋಜನೆಗಳನ್ನು ಒಳಗೊಂಡ ಮಾಸ್ಟರ್ ಪ್ಲಾನ್ (ಮಹಾಯೋಜನೆ) ಶೀಘ್ರ ಬಿಡುಗಡೆ ಮಾಡಲಾಗುವುದು. ಅದಕ್ಕೆ ನಾಗರಿಕರು ಯಾವುದೇ ತಿದ್ದುಪಡಿಗಳಿದ್ದರೆ ಸೂಚಿಸಬಹುದು ಎಂದು ಸಚಿವ ಗುಂಡೂರಾವ್ ತಿಳಿಸಿದರು. 

ಕೆಸಿಸಿಐ ಅಧ್ಯಕ್ಷ ಪಿ.ಬಿ.ಅಹ್ಮದ್ ಮುದಸ್ಸರ್ ಸ್ವಾಗತಿಸಿ, ಕೆಸಿಸಿಐ ಪರವಾಗಿ ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಿದರು. 

ಬೈಕಂಪಾಡಿಯಲ್ಲಿನ ಕೈಗಾರಿಕಾ ಪ್ರದೇಶದ ರಸ್ತೆಗಳ ಅಭಿವೃದ್ಧಿಗೊಳಿಸುವಂತೆ ಉದ್ಯಮಿಗಳಾದ ಅರುಣ್ ಪಡಿಯಾರ್, ಬಿ.ಎ. ನಝೀರ್ ಮನವಿ ಮಾಡಿದರು. ಉದ್ಯಮಿ ಯತೀಶ್ ಬೈಕಂಪಾಡಿ ಮಾತನಾಡಿ, ಪದೇ ಪದೇ ಕರಾವಳಿ ಸಮುದ್ರಕೊರೆತಕ್ಕೆ ತುತ್ತಾಗುವುದರಿಂದ ಕೃತಕ ರೀಫ್ ನಿರ್ಮಾಣದಂತಹ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಸಲಹೆ ನೀಡಿದರು. ಆತ್ಮಿಕಾ ಅಮೀನ್ ಮಾತನಾಡಿದರು. 

ಉಪಾಧ್ಯಕ್ಷ ದಿವಾಕರ್ ಪೈ ಕೊಚ್ಚಿಕಾರ್, ಕಾರ್ಯದರ್ಶಿಗಳಾದ ಅಶ್ವಿನ್ ರೈ ಮಾರೂರು, ಜೀತನ್ ಅಲೆನ್ ಸಿಕ್ವೇರ ಉಪಸ್ಥಿತರಿದ್ದರು. ಮೈತ್ರೇಯ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article