ಕರಾವಳಿಯಲ್ಲಿ ಯಲ್ಲೋ ಅಲರ್ಟ್
ಮಂಗಳೂರು: ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದ್ದು, ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ.
ಈಗಿನಂತೆ ಮುಂದಿನ 10 ದಿನಗಳವರೆಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಅರಬ್ಬಿ ಸಮುದ್ರದ ದಕ್ಷಿಣ ಕೇರಳ ತೀರದಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗಿದ್ದು, ಇನ್ನೆರಡು ದಿನಗಳಲ್ಲಿ ವಾಯುಭಾರ ಕುಸಿತವಾಗಿ ಮಾರ್ಪಾಡಾಗುವ ಲಕ್ಷಣಗಳಿವೆ. ಮುಂದೆ ಪಶ್ಚಿಮಾಭಿಮುಖವಾಗಿ ಚಲಿಸುವ ಸಾಧ್ಯತೆಗಳಿದ್ದು, ಅಲ್ಲಿಯವರೆಗೆ ಹಿಂಗಾರು ಮಳೆ ಚುರುಕಾಗಲಿದೆ.
ಕರಾವಳಿಯಲ್ಲಿ ಗುರುವಾರ ಹಲವಡೆ ಗುಡುಗು, ಮಿಂಚು ಸಹಿತ ಹಗುರದಿಂದ ಮಳೆಯಾಗಿದೆ. ದ.ಕ. ಜಿಲ್ಲೆಯಾದ್ಯಂತ ಇಡೀ ದಿನ ಬಿಸಿಲು ಸಹಿತ ಸಂಜೆ ಅಲ್ಲಲ್ಲಿ ಅಲ್ಪ ಮಳೆ ಸುರಿದಿದೆ. ಕೆಲವು ದಿನಗಳಿಂದ ಮಳೆ ದೂರವಾಗಿದ್ದು, ಈಗ ಮತ್ತೆ ಎಲ್ಲೆಡೆ ಮಳೆಯ ವಾತಾವರಣ ಕಂಡುಬಂದಿದೆ. ದ.ಕ. ಜಿಲ್ಲೆಯ ಗ್ರಾಮಿಣ ಭಾಗದಲ್ಲಿ ಗುರುವಾರ ನಸುಕಿನ ಜಾವದಿಂದಲೇ ಜಿಟಿಜಿಟಿ ಮಳೆ ಕಾಣಿಸಿತ್ತು. ಬೆಳಗ್ಗೆ ಸ್ವಲ್ಪ ಹೊತ್ತು ಮಳೆಗೆ ಬಿಡುವು ಹೊರತುಪಡಿಸಿದರೆ ಇಡೀ ದಿನ ಬಿಸಿಲೂ ಇತ್ತು. ದ.ಕ ಜಿಲ್ಲೆಯಲ್ಲಿ ಗುರುವಾಬೆಳಗ್ಗಿನ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ 4.1 ಮಿಮಿ ಮಳೆ ದಾಖಲಾಗಿತು.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ 3-4 ದಿನ ಅರಬ್ಬಿ ಸಮುದ್ರದಲ್ಲಿ ಮಳೆ ಮತ್ತು ಭಾರೀ ಗಾಳಿ ಬೀಸುವುದರಿಂದ ಪ್ರಕ್ಷುಬ್ದವಾಗಿರುತ್ತದೆ. ಆದ್ದರಿಂದ ಅನಾಹುತವನ್ನು ತಡೆಯುವ ಸಲುವಾಗಿ ನಾಡದೋಣಿ ಮೀನುಗಾರರು ಸೇರಿದಂತೆ ಯಾರೂ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಿದೆ.