ಚಿನ್ನಾಭರಣ ಪಾಲಿಶಿಂಗ್ ನೆಪದಲ್ಲಿ ಚಿನ್ನ ಕರಗಿಸಿ ವಂಚನೆ

ಚಿನ್ನಾಭರಣ ಪಾಲಿಶಿಂಗ್ ನೆಪದಲ್ಲಿ ಚಿನ್ನ ಕರಗಿಸಿ ವಂಚನೆ

ಮಂಗಳೂರು: ಆಭರಣಗಳನ್ನ ಪಾಲಿಶಿಂಗ್ ಮಾಡಿಸುವ ಸೋಗಿನಲ್ಲಿ ಬಂದ ಅಪರಿಚಿತ ಮಧ್ಯ ವಯಸ್ಕನೊಬ್ಬ ವಿಧವೆಯೋರ್ವರನ್ನ ಯಾಮಾರಿಸಿ ಆಕೆಯ ಕತ್ತಿನ ಸರದಿಂದ 14 ಗ್ರಾಂ ಚಿನ್ನವನ್ನ ಕರಗಿಸಿ ಹೊತ್ತೊಯ್ದ ಘಟನೆ ಉಳ್ಳಾಲ ತಾಲೂಕಿನ ಅಂಬ್ಲಮೊಗರು ಎಂಬಲ್ಲಿ ಬುಧವಾರ ನಡೆದಿದೆ. 

ಉಳ್ಳಾಲ ತಾಲೂಕಿನ ಅಂಬ್ಲಮೊಗರು ನಿವಾಸಿ ಸುಂದರಿ (60) ಎಂಬ ವಿಧವೆ ವಂಚಕನಿಂದ ಮೋಸ ಹೋದವರು. ಸುಂದರಿಯವರು ದಿನನಿತ್ಯಲೂ ಸುದರ್ಶನ್ ಶೆಟ್ಟಿ ಎಂಬವರ ಮನೆಗೆ ಮನೆಕೆಲಸಕ್ಕೆ ತೆರಳಿ ಮಧ್ಯಾಹ್ನ 12 ಗಂಟೆಗೆ ಮರಳುತ್ತಿದ್ದರು. ನಿನ್ನೆಯೂ ಕೆಲಸಕ್ಕೆ ತೆರಳಿದ್ದ ಸುಂದರಿ ಅವರು ಬೆಳಗ್ಗೆ 11.30ಕ್ಕೆ ಬೇಗನೆ ಕೆಲಸ ಮುಗಿಸಿ ಹಿಂತಿರುಗಿದ್ದಾರೆ. ಅವರು ಮನೆಯ ಕಡೆ ತೆರಳುತ್ತಿದ್ದ ವೇಳೆ ಅಂಬ್ಲಮೊಗರುವಿನ ಕಂಬಳ ಗದ್ದೆಯ ನಿರ್ಜನ ಪ್ರದೇಶದಲ್ಲಿ ಓರ್ವ ಅಪರಿಚಿತ ಮಧ್ಯ ವಯಸ್ಕ ಎದುರಾಗಿದ್ದು ಈ ಭಾಗದಲ್ಲಿ ಎಷ್ಟು ಮನೆಗಳು ಇವೆಯೆಂದು ಸುಂದರಿಯವರಲ್ಲಿ ವಿಚಾರಿಸಿದ್ದಾನೆ. 

ಈ ವೇಳೆ ಆತ ತನ್ನಲ್ಲಿದ್ದ ಬ್ಯಾಗಿನಿಂದ ಚಿನ್ನವನ್ನ ಹೋಲುವ ಬಲೆಯೊಂದನ್ನ ಹೊರತೆಗೆದು ತೋರಿಸಿ ತಾನು ಈ ರೀತಿ ಹೊಳಪು ಬರುವಂತೆ ಚಿನ್ನಾಭರಣಗಳನ್ನ ಪಾಲಿಶ್ ಮಾಡುತ್ತೇನೆಂದು ಹೇಳಿಕೊಂಡಿದ್ದು, ಸುಂದರಿ ಅವರ ಕತ್ತಲ್ಲಿದ್ದ ಚಿನ್ನದ ಸರವನ್ನ ಪಾಲಿಶ್ ಮಾಡಿಕೊಡುವುದಾಗಿ ಹೇಳಿದ್ದಾನೆ. 

ಆರಂಭದಲ್ಲಿ ನಿರಾಕರಿಸಿದ ಮಹಿಳೆ ಬಳಿಕ 18 ಗ್ರಾಂ ತೂಗುವ ಚಿನ್ನದ ಸರವನ್ನ ಕತ್ತಿನಿಂದ ತೆಗೆದು ಅಪರಿಚಿತನಿಗೆ ನೀಡಿದ್ದಾರೆ. ಅಪರಿಚಿತ ಸರವನ್ನ ಯಾವುದೋ ನೀರಲ್ಲಿ ಸ್ವಲ್ಪ ಹೊತ್ತು ಅದ್ದಿ ತೆಗೆದು ಮಹಿಳೆಗೆ ಹಿಂತಿರುಗಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸರದ ಗಾತ್ರ ಇದ್ದಕ್ಕಿದ್ದಂತೆ ಕಡಿಮೆ ಆದುದನ್ನ ಕಂಡು ವಿಚಲಿತರಾದ ಮಹಿಳೆ ಸರವನ್ನ ಮಾಪನದಲ್ಲಿ ಪರಿಶೀಲಿಸಿದಾಗ ಅದರಲ್ಲಿ 14 ಗ್ರಾಂನಷ್ಟು ಚಿನ್ನವು ಕರಗಿಹೋಗಿದ್ದು, ತಾನು ಮೋಸ ಹೋಗಿರುವ ಬಗ್ಗೆ ಆಕೆಗೆ ಅರಿವಾಗಿದೆ.

ಅಂಬ್ಲಮೊಗರು ಪ್ರದೇಶದ ಜನರು ಮಹಿಳೆಯ ಚಿನ್ನವನ್ನ ತೊಳೆದು ಯಾಮಾರಿಸಿದ ವ್ಯಕ್ತಿಯನ್ನ ಹುಡುಕಾಟ ನಡೆಸಿದ್ದು ಅಷ್ಟರಲ್ಲೇ ಅಲ್ಲಿಂದ ಎಸ್ಕೇಪ್ ಆಗಿದ್ದ. ನಿನ್ನೆ ಸಂಜೆ ಸುಂದರಿ ಅವರು ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಚಿನ್ನ , ಬೆಳ್ಳಿಯ ಆಭರಣಗಳನ್ನ ತೊಳೆದು ಕೊಡುವ ನೆಪದಲ್ಲಿ ವಂಚಕರು ನಿಮ್ಮ ಮನೆಗೂ ಭೇಟಿ ನೀಡಬಹುದು. ಆ ರೀತಿಯ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ 112/100 ತುರ್ತು ಪೊಲೀಸ್ ಸಹಾಯವಾಣಿಗೆ ಕರೆ ಮಾಡುವಂತೆ ಕೊಣಾಜೆ ಪೊಲೀಸರು ಎಚ್ಚರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article