ಕುಂಜತ್ತಬೈಲ್ ಲೇಔಟ್: ಮೂಲಸೌಕರ್ಯ ಅಭಿವೃದ್ಧಿಪಡಿಸಲು ಸೂಚನೆ

ಕುಂಜತ್ತಬೈಲ್ ಲೇಔಟ್: ಮೂಲಸೌಕರ್ಯ ಅಭಿವೃದ್ಧಿಪಡಿಸಲು ಸೂಚನೆ


ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಕುಂಜತ್ತಬೈಲ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ವಸತಿ ಲೇಔಟ್ ನಲ್ಲಿ ಮೂಲ ಸೌಲಭ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಜನಾಕರ್ಷಣೆಗೊಳಿಸುವಂತೆ  ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ಅವರು ಸೋಮವಾರ ಕುಂಜತ್‌ಬೈಲ್ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದರು.

ಬಡಾವಣೆಯಲ್ಲಿ ಉದ್ಯಾನವನ, ದಾರಿದೀಪ ಸೇರಿದಂತೆ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಬೇಕು. ನಿವೇಶನಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಅರಿವು ಮತ್ತು ಮಾಹಿತಿ ನೀಡುವಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಕಡೆ ಈ ಬಗ್ಗೆ ಪ್ರಚಾರಪಡಿಸಬೇಕು ಎಂದು ಸೂಚಿಸಿದರು. 

ಕುಂಜತ್ತಬೈಲ್ ಬಡಾವಣೆಯಲ್ಲಿ ಆಧುನಿಕ ಸೌಲಭ್ಯಗಳು ದೊರಕುವಂತೆ ಅಭಿವೃದ್ಧಿಪಡಿಸಬೇಕು. ನಗರಾಭಿವೃದ್ಧಿ ಪ್ರಾಧಿಕಾರವು ಈ ಬಗ್ಗೆ ಹೆಚ್ಚು ಒತ್ತು ನೀಡಿ ಬಡಾವಣೆಯನ್ನು ನಿರ್ಮಿಸಬೇಕು ಎಂದು ಅವರು ತಿಳಿಸಿದರು.  ಕುಂಜತ್ತಬೈಲ್ ಬಡಾವಣೆಯ ನಿವೇಶನ ಮಾರಾಟದಿಂದ ಬಂದ ಹಣದಲ್ಲಿ ನಗರದ ಇನ್ನೊಂದು ಕಡೆ ಬಡಾವಣೆಯನ್ನು ಅಭಿವೃದ್ಧಿಗೊಳಿಸುವಂತೆ ಸಚಿವರು ತಿಳಿಸಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಅವರು ಸಚಿವರಿಗೆ ಮಾಹಿತಿ ನೀಡಿ, ಈ ಬಡಾವಣೆಯಲ್ಲಿ 208 ನಿವೇಶನಗಳಿವೆ. ಈಗಾಗಲೇ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದ್ದು, ನವೆಂಬರ್ 18 ಕೊನೆಯ ದಿನವಾಗಿರುತ್ತದೆ ಎಂದು ತಿಳಿಸಿದರು. ಸಾರ್ವಜನಿಕರಿಗೆ ಅತಿ ಕಡಿಮೆ ದರದಲ್ಲಿ ನಿವೇಶನ ಲಭ್ಯವಾಗಲು ಸೈಟ್ ದರವನ್ನು ಕಡಿಮೆಗೊಳಿಸಲಾಗಿದೆ  ಎಂದು ಹೇಳಿದರು. 

ಸಚಿವರು  ನಂತರ ಕೊಣಾಜೆಯಲ್ಲಿ  ನಿರ್ಮಾಣಗೊಳ್ಳುತ್ತಿರುವ ಮೂಡಾ  ವಸತಿ ಬಡಾವಣೆಗೆ  ಭೇಟಿ ನೀಡಿದರು.

ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ  ಮುಹಮ್ಮದ್ ನಜೀರ್,  ಮೂಡಾ ಸದಸ್ಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article