‘ಎಸ್‌ಐಟಿ ನನಗೆ ಮೊಬೈಲ್ ಉಡುಗೊರೆಯಾಗಿ ನೀಡಿದೆ’: ಸುಜಾತಾ ಭಟ್
ಮಂಗಳೂರು: ನನ್ನ ಪುತ್ರಿ, ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ಹೇಳಿ ಸುದ್ದಿಯಾಗಿದ್ದ ಸುಜಾತಾ ಭಟ್ ನಂತರ ದಿನಕ್ಕೊಂದರಂತೆ ಗೊಂದಲಕಾರಿ ಹೇಳಿಕೆ ನೀಡಿ ಸಂಪೂರ್ಣ ಪ್ರಕರಣದ ತನಿಖೆಯ ದಿಕ್ಕನ್ನೇ ತಪ್ಪಿಸಿದ್ದರು, ನಂತರ ನನಗೆ ಅನನ್ಯಾ ಭಟ್ ಎಂಬ ಮಗಳೇ ಇಲ್ಲ ನಾನು ಹೇಳಿದ್ದು ಸಂಪೂರ್ಣ ಸುಳ್ಳು. ಜಮೀನಿನ ವಿವಾದದ ಹಿನ್ನೆಲೆಯಲ್ಲಿ ನಾನು ಸುಳ್ಳು ಹೇಳಿದ್ದೆ ಎಂದಿದ್ದರು, ಇದೀಗ ವಿಶೇಷ ತನಿಖಾ ತಂಡ (ಎಸ್‌ಐಟಿ) ನನಗೆ ಹೊಸ ಮೊಬೈಲ್ ಉಡುಗೊರೆಯಾಗಿ ನೀಡಿದೆ ಎಂದು ಹೇಳುವ ಮೂಲಕ ಎಸ್‌ಐಟಿ ವಿಶ್ವಾಸಾರ್ಹತೆಯನ್ನೇ ಪ್ರಶ್ನೆ ಮಾಡುವಂತೆ ಮಾಡಿದ್ದಾರೆ.
ಬೆಂಗಳೂರಿನ ಯುಟ್ಯೂಬ್ ಸುದ್ದಿ ವಾಹಿನಿಗೆ ಆಕೆ ನೀಡಿದ ಸಂದರ್ಶನದಲ್ಲಿ ವಿಚಾರಣೆಯ ಸಮಯದಲ್ಲಿ ಎಸ್‌ಐಟಿ ಅಧಿಕಾರಿಗಳು ತನ್ನನ್ನು ಉತ್ತಮವಾಗಿ ನಡೆಸಿಕೊಂಡಿದ್ದರು. ಒಳ್ಳೆಯ ಆಹಾರ, ಚಾಕಲೇಟ್ ಕೂಡಠ ನೀಡಿದ್ದರು. ನಾನು ಹೊರಡುವಾಗ ನನಗೆ ಮೊಬೈಲ್ ಫೋನ್ ಅನ್ನು ಸಹ ನೀಡಿದರು" ಎಂದಿದ್ದಾರೆ.
ಎಸ್‌ಐಟಿ ಅಧಿಕಾರಿಗಳಾದ ಮಂಜುನಾಥ್ ಗೌಡ ಮತ್ತು ಗುಣಪಾಲ್ ಒಳ್ಳೆಯವರು. ಯಾವುದೇ ಕಾರಣವಿಲ್ಲದೆ ಅವರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ ಎಂದಿದ್ದಾರೆ.
ಸುಜಾತಾ ಭಟ್ ಹೇಳಿಕೆ ಅನುಮಾನಗಳನ್ನು ಸೃಷ್ಟಿಸಿದ್ದು, ಆಕೆಯನ್ನು ಎಸ್‌ಐಟಿ ಮತ್ತೊಮ್ಮೆ ತನಿಖೆಗೆ ಕರೆಸುವ ಸಾಧ್ಯತೆಗಳಿವೆ.