ರಾಜಧನ ಕಡಿಮೆಯಾದರೂ ಕೆಂಪು ಕಲ್ಲಿನ ದರ ಇಳಿಕೆಯಾಗಿಲ್ಲ: ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ಒತ್ತಾಯ

ರಾಜಧನ ಕಡಿಮೆಯಾದರೂ ಕೆಂಪು ಕಲ್ಲಿನ ದರ ಇಳಿಕೆಯಾಗಿಲ್ಲ: ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ಒತ್ತಾಯ


ಮಂಗಳೂರು: ಕೆಂಪು ಕಲ್ಲಿನ ಗಣಿಗಾರಿಕೆಯ ಪರವಾನಿಗೆಯನ್ನು ಸರಳೀಕರಣಗೊಳಿಸಿ ಗುತ್ತಿಗೆದಾರರ ರಾಜಧನವನ್ನೂ ಸರಕಾರ ಕಡಿಮೆಗೊಳಿಸಿದೆ. ಆದರೆ ಕೆಂಪುಕಲ್ಲಿನ ಪೂರೈಕೆದಾರರು ದುಪ್ಪಟ್ಟು ದರ ಪಡೆಯುತ್ತಿರುವುದರಿಂದ ಕಟ್ಟಡ ಕಾಮಗಾರಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ದ.ಕ. ಜಿಲ್ಲಾ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ಒತ್ತಾಯಿಸಿದೆ.

ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಸೋಸಿಯೇಶನ್‌ನ ಅಧ್ಯಕ್ಷ ಮಹಾಬಲ ಕೊಟ್ಟಾರಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಜಿಲ್ಲಾಡಳಿತ ಕ್ರಮ ವಹಿಸಬೇಕು ಇಲ್ಲವಾದಲ್ಲಿ, ಪ್ರತಿಭಟನೆ ಅನಿವಾರ್ಯ ಎಂದರು. 

ಅಕ್ರಮವಾಗಿ ಕೆಂಪು ಕಲ್ಲಿನ ಗಣಿಗಾರಿಕೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆಲವೊಂದು ಕಟ್ಟು ನಿಟ್ಟಿನ ಕ್ರಮ ವಹಿಸಿದ್ದರು. ಆ ಸಂದರ್ಭ ರಾಜಧನವೂ 265 ರೂ.ಗಳಿಂದ ಕೆಂಪು ಕಲ್ಲು ಗಣಿಗಾರಿಕೆ ನಡೆಸುವವರು ಸಂಕಷ್ಟಕ್ಕೆ ಸಿಲುಕಿದ್ದರು. ಕೆಂಪು ಕಲ್ಲು ಸಿಗದೆ ಸುಮಾರು ಮೂರ್ನಾಲ್ಕು ತಿಂಗಳು ನಿರ್ಮಾಣ ಕಾಮಗಾರಿಗಳಿಗೆ ತೊಂದರೆಯಾಗಿತ್ತು. ಬಳಿಕ ಈ ಬಗ್ಗೆ ಕೆಂಪು ಕಲ್ಲು ಗಣಿಗಾರಿಕೆ ಮಾಡುವವರು ಸೇರಿದಂತೆ ನಿರ್ಮಾಣ ಕಾಮಗಾರಿ ಗುತ್ತಿಗೆದಾರರು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಜತೆ ಸೇರಿ ಚರ್ಚಿಸಿ ಕ್ರಮ ವಹಿಸಲಾಗಿತು. ರಾಜಧನವನ್ನು 265 ರೂ.ಗಳಿಂದ 90ರೂ.ನಿಂದ 100 ರೂ.ಗಳಿಗೆ ಇಳಿಕೆ ಮಾಡಲಾಗಿದೆ. 3 ಅಡಿ ಗಣಿಗಾರಿಕೆಗೆ ಇದ್ದ ನಿಯಮವನ್ನು ಆರು ಅಡಿಗಳಿಗೆ ಹೆಚ್ಚಿಸಿ ಕೆಂಪು ಕಲ್ಲು ಗಣಿಗಾರಿಕೆಗೆ ಪರವಾನಿಗೆ ನೀಡಲಾಗುತ್ತಿದೆ. ಹಿಂದೆ 30 ರೂ.ಗಳಿಗೆ ದೊರೆಯುತ್ತಿದ್ದ ಕಲ್ಲಿನ ದರ ಈಗ 55 ರೂ.ಗಳಿವೆ. ರಾಜಧನ ಇಳಿಕೆಯಾದರೂ ಕೆಂಪು ಕಲ್ಲಿನ ದರ ಇಳಿಕೆ ಮಾಡಿಲ್ಲ. ಈ ದರದಲ್ಲಿ 1,200 ಚದರ ಅಡಿ ವಿಸ್ತೀರ್ಣದ ಮನೆಗೆ ಅಂದಾಜು ಸುಮಾರು 3 ಲಕ್ಷದವರೆಗೆ ಹೆಚ್ಚಳವಾಗುತ್ತದೆ. ಈ ದರದಲ್ಲಿ ನಮಗೂ ಮನೆ ನಿರ್ಮಾಣ ಕಾಮಗಾರಿ ಸಾಧ್ಯವಾಗುತ್ತಿಲ್ಲ. ನಿರ್ದಿಷ್ಟ ಮೊತ್ತಕ್ಕೆ ಮನೆ ನಿರ್ಮಾಣಕ್ಕೆ ಒಪ್ಪಿಕೊಂಡ ಗುತ್ತಿಗೆದಾರರು ಈ ದರ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ನಾವು ದರ ಏರಿಕೆ ಮಾಡಿದರೆ ಜನಸಾಮಾನ್ಯರಿಗೆ ಮನೆ ಕಟ್ಟಲು ಸಮಸ್ಯೆಯಾಗಲಿದೆ. 

ಈ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ನ್ಯಾಯಯುತ ದರ ನಿಗದಿಪಡಿಸಬೇಕು. ಅದಲ್ಲದೆ ಸಿಆರ್ಝೆಡ್ ವ್ಯಾಪ್ತಿಯ ಮರಳಿನ ಸಮಸ್ಯೆ ಬಗೆಹರಿಸಬೇಕು. ಮೂರು ಯುನಿಟ್ ಮರಳಿನ ದರ 6,500 ರೂ.ನಿಂದ ಇದೀಗ 23,000ಕ್ಕೆ ಏರಿಕೆಯಾಗಿದೆ. ನಾನ್ ಸಿಆರ್ಝೆಡ್ ಮರಳಿನಲ್ಲಿ ಅರ್ಧಕರ್ಧ ಕಲ್ಲು ಮಣ್ಣು ಸೇರಿರುತ್ತದೆ. ಇದರಿಂದಾಗಿ ನಷ್ಟವೇ ಅಧಿಕ ಎಂದು ಅವರು ಹೇಳಿದರು. 

ಜಿಎಸ್ಟಿಯಿಂದ ಸಿಮೆಂಟ್, ಕಬ್ಬಿಣದ ದರ ಇಳಿಕೆಯಾಗಿದೆಯಲ್ಲಾ ಎಂಬ ಪ್ರಶ್ನೆಗೆ, ಸಿಮೆಂಟ್ಗೆ ಶೇ. 28ರಷ್ಟಿದ್ದ ಜಿಎಸ್ಟಿ ಶೇ. 18ಕ್ಕೆ ಇಳಿಕೆಯಾಗಿದೆ. ಆದರೆ ಸಿಮೆಂಟ್ ದರವನ್ನು ಹೆಚ್ಚಿಸಿರುವುದರಿಂದ ಅದರ ಲಾಭ ನಮಗೆ ಸಿಗುವುದಿಲ್ಲ. ಕಬ್ಬಿಣದ ಜಿಎಸ್ಟಿ ಶೇ. 5ರಷ್ಟಿತ್ತು. ಈಗಲೂ ಅಷ್ಟೇ ಇದೆ ಎಂದವರು ಉತ್ತರಿಸಿದರು. 

ಅಸೋಸಿಯೇಶನ್ ಉಪಾಧ್ಯಕ್ಷ ದಿನಕರ ಸುವರ್ಣ, ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಜೋಗಿ, ಕಾರ್ಯದರ್ಶಿ ಅಶೋಕ್ ಕುಲಾಲ್, ಕೋಶಾಧಿಕಾರಿ ಸುರೇಶ್ ಜೆ., ಸದಸ್ಯರಾದ ವೆಂಕಟೇಶ್, ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article