ಮಂಚಿ ಪ್ರೌಢಶಾಲಾ ಸುವರ್ಣಮಹೋತ್ಸವ ಕಟ್ಟಡ ನಿರ್ಮಾಣ ಸಮಿತಿ ಸಭೆ

ಮಂಚಿ ಪ್ರೌಢಶಾಲಾ ಸುವರ್ಣಮಹೋತ್ಸವ ಕಟ್ಟಡ ನಿರ್ಮಾಣ ಸಮಿತಿ ಸಭೆ


ಮಂಗಳೂರು: ಮಂಚಿ ಕೊಳ್ನಾಡು ಪ್ರೌಢಶಾಲೆಯು 1977ರಲ್ಲಿ ಸ್ಥಾಪನೆಗೊಂಡು 2027ಕ್ಕೆ 50 ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವವನ್ನು ಆಚರಿಸಲಿದೆ. ಈ ಕಾರಣದಿಂದ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು, ಶಾಲಾ ಹಿತೈಷಿಗಳನ್ನು, ಊರಿನ ವಿದ್ಯಾಭಿಮಾನಿಗಳನ್ನು ಸೇರಿಸಿ ಸುವರ್ಣಮಹೋತ್ಸವ ಕಟ್ಟಡ ನಿರ್ಮಾಣ ಸಮಿತಿ ರಚನಾ ಸಭೆಯನ್ನು ಶಾಲಾ ವತಿಯಿಂದ ಅ.12 ರಂದು ನಡೆಯಿತು.

ಈ ಸಂದರ್ಭದಲ್ಲಿ ಸುವರ್ಣಮಹೋತ್ಸವ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಮಮತಾ ಪಿ. ಶೆಟ್ಟಿ ಮಂಚಿ, ಪ್ರಧಾನ ಕಾರ್ಯದರ್ಶಿಯಾಗಿ ಮ್ಯಾಕ್ಸಿಮ್ ಫರ್ನಾಂಡಿಸ್, ಪ್ರಧಾನ ಕೋಶಾಧಿಕಾರಿಯಾಗಿ ಉಮಾನಾಥ ರೈ ಮೇರಾವು ಹಾಗೂ ಪ್ರಧಾನ ಸಂಚಾಲಕರಾಗಿ ರಮಾನಂದ ನೂಜಿಪ್ಪಾಡಿ ಆಯ್ಕೆಗೊಂಡರು. ಉಳಿದಂತೆ ಇನ್ನಷ್ಟು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ ಮಾತನಾಡಿ, ಶಾಲೆಯ ಹಿರಿಯ ವಿದ್ಯಾರ್ಥಿಯಾಗಿ ಶಾಲೆಯ ಋಣವನ್ನು ತೀರಿಸುವ ಸದಾವಕಾಶ ಒದಗಿ ಬರುವುದು ಭಾಗ್ಯವಾಗಿದೆ. ಬದುಕು ಕಟ್ಟಿಕೊಟ್ಟ ಶಾಲೆಯ ಸುವರ್ಣ ಸಂಭ್ರಮಕ್ಕೆ ಎಲ್ಲರೂ ಸಾಕ್ಷಿಗಳಾಗಬೇಕು ಎಂದರು.

ಮಾರ್ಗದರ್ಶನ ಸಮಿತಿಯ ನಿವೃತ್ತ ಮುಖ್ಯ ಶಿಕ್ಷಕ ಪುರುಷೋತ್ತಮ ಟಿ. ಮಾತನಾಡಿ, ಸುವರ್ಣ ಸಂಭ್ರಮವನ್ನು ಕಟ್ಟಡ ನಿರ್ಮಾಣದ ಮೂಲಕ ಅರ್ಥಪೂರ್ಣವಾಗಿ ನೆರವೇರಿಸಲು ಮುಂದಾಗಿರುವ ಎಲ್ಲಾ ಹಿರಿಯ ವಿದ್ಯಾರ್ಥಿಗಳು, ಶಾಲೆಯ ಹಿತೈಷಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಶಾಲಾ ಮುಖ್ಯ ಶಿಕ್ಷಕಿ ಸುಶೀಲ ವಿಟ್ಲ ಸುವರ್ಣ ಸಂಭ್ರಮದ ಆಶಯ ನುಡಿಗಳನ್ನು ಆಡಿದರು. 

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಶಂಕರ್ ರಾವ್ ಮಾತನಾಡಿ, ಸೌಹಾರ್ಧತೆ, ಸಮಾನತೆಯನ್ನು ಸಾರುವ ಶಾಲೆ ಎಲ್ಲಾ ಸಮುದಾಯದವರ ದೇಗುಲವಾಗಿದ್ದು ಶಾಲೆಯ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಶ್ರೀರಾಮಮೂರ್ತಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ರಮೇಶ್ ರಾವ್ ಪತ್ತುಮುಡಿ, ಗಣೇಶ್ ಪ್ರಭು, ಸುಲೈಮಾನ್ ಜಿ. ಸುರಿಬೈಲು, ಗಿರೀಶ್ ಗೌಡ ಮತ್ತು ಹಿರಿಯ ವಿದ್ಯಾರ್ಥಿಗಳು ಹಾಗೂ ಶಾಲಾ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಆಯ್ಕೆಯಾದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಶಾಲೆಯ ಮೂಲಭೂತ ಭೌತಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಸುವರ್ಣ ಮಹೋತ್ಸವ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಪ್ರತಿಯೊಬ್ಬರು ತಮ್ಮ ನೆರವಿನ ಹಸ್ತವನ್ನು ನೀಡಬೇಕೆಂದು ವಿನಂತಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ತಾರಾನಾಥ್ ಕೈರಂಗಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article