ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲದಿದ್ದಾಗ ಶಿಕ್ಷಣ ಕ್ಷೇತ್ರ ಅಭಿವೃದ್ಧಿ: ಭೋಜೇ ಗೌಡ
ಕುಪ್ಮಾ ರಾಜ್ಯ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮಾತನಾಡಿ, ಕೊರೋನಾ ವೇಳೆ ಖಾಸಗಿ ಪಿಯು ಶಿಕ್ಷಣ ಸಂಸ್ಥೆಗಳು ತೊಂದರೆಗೆ ಸಿಲುಕಿದ್ದು, ಬಳಿಕ ಸುಧಾರಿಸಿಕೊಂಡಿವೆ. ವಿದ್ಯಾರ್ಥಿಗಳ ಜೀವನದಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ವ್ಯಕ್ತಿತ್ವ ರೂಪಿಸುವ ಹಂತಗಳಾಗಿವೆ ಎಂದರು.
ಇನ್ನೋರ್ವ ಗೌರವಾಧ್ಯಕ್ಷ ಡಾ.ಕೆ.ಸಿ.ನಾಯ್ಕ್ ಮಾತನಾಡಿ, ನಾನೇ ಸ್ಥಾಪಿಸಿದ ಕುಪ್ಮಾ ರಾಜ್ಯ ಮಟ್ಟಕ್ಕೆ ವಿಸ್ತರಣೆಗೊಳ್ಳುತ್ತಿರುವುದು ಖುಷಿ ತಂದಿದೆ. ಇನ್ನಷ್ಟು ಮಂದಿ ಸದಸ್ಯರ ಸೇರ್ಪಡೆಯಾಗಬೇಕಾಗಿದೆ ಎಂದರು.
ರಾಜ್ಯ ಸಮಿತಿ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್.ನಾಯಕ್ ಮಾತನಾಡಿ, 130 ಪಿಯು ಕಾಲೇಜು ಪೈಕಿ ಇದರ ಸದಸ್ಯರಾದವರು 31 ಕಾಲೇಜುಗಳು ಮಾತ್ರ. ಪ್ರತಿಯೊಬ್ಬ ಸದಸ್ಯರೂ ಹೊಸದಾಗಿ ಕನಿಷ್ಠ ಒಬ್ಬರು ಸದಸ್ಯರ ಸೇರ್ಪಡೆಗೆ ಪ್ರಯತ್ನಿಸಬೇಕು. ಈ ಮೂಲಕ ಕುಪ್ಮಾ ಸಂಘಟನೆ ಬಲಪಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ ರಾಜ್ಯ ಸಮಿತಿ ಅಧ್ಯಕ್ಷ ಡಾ.ಮೋಹನ ಆಳ್ವ ಮಾತನಾಡಿ, ರಾಜ್ಯದಲ್ಲಿ 6,189 ಪಿಯು ಕಾಲೇಜುಗಳಿದ್ದು, 226 ಕಾಲೇಜುಗಳು ಮಾತ್ರ ಕುಪ್ಮಾ ಜೊತೆ ಜೋಡಣೆಯಾಗಿವೆ. ಪ್ರತಿ ಜಿಲ್ಲೆಯ ಪಿಯು ಕಾಲೇಜುಗಳು ಕುಪ್ಮಾ ಜೊತೆ ಸೇರಿದಾಗ ಮಾತ್ರ ಸಂಘಟನೆ ಬಲಗೊಳ್ಳಲು ಸಾಧ್ಯ. ಹೊರ ರಾಜ್ಯಗಳ ಪಿಯು ಶಿಕ್ಷಣ ಸಂಸ್ಥೆಗಳು ನಮ್ಮ ರಾಜ್ಯದಲ್ಲಿ ತಲೆ ಎತ್ತುತ್ತಿವೆ. ಶೇ.60 ರಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ಪಿಯು ಶಿಕ್ಷಣಕ್ಕೆ ತಮ್ಮದೇ ಕೊಡುಗೆ ನೀಡುತ್ತಿವೆ. ಶಿಕ್ಷಣಕರ ನೇಮಕ, ಪ್ರಶ್ನೆ ಪತ್ರಿಕೆ ತಯಾರಿ, ಪ್ರಶಸ್ತಿ ಆಯ್ಕೆಗಳಿಗೆ ಸರ್ಕಾರ ಖಾಸಗಿ ಪಿಯು ಶಿಕ್ಷಣ ಸಂಸ್ಥೆಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಎಸ್‌ಎಸ್‌ಎಲ್‌ಸಿ ಮತ್ತು ಪದವಿ ತರಗತಿಗಳಿಗೆ ಇದ್ದಂತೆ ಪಿಯುಗೂ ಪ್ರತಿಭಾವಂತ ವಿದ್ಯಾರ್ಥಿಗಳ ಅನ್ವೇಷಣೆಗೆ ಪ್ರತ್ಯೇಕ ಕಾರ್ಯಕ್ರಮ ನಡೆಯಬೇಕು ಎಂದರು.
ಈ ಸಂದರ್ಭ ಹೊಸ ಪದಾಧಿಕಾರಿಗಳಿಗೆ ಬ್ಯಾಡ್ಜ್ ನೀಡುವ ಮೂಲಕ ಪದಗ್ರಹಣ ನೆರವೇರಿಸಲಾಯಿತು. ಬಳಿಕ ಅಧಿಕಾರ ಹಸ್ತಾಂತರ ಪತ್ರ ಹಸ್ತಾಂತರಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕರನ್ನು ಗೌರವಿಸಲಾಯಿತು.
ಅಧ್ಯಕ್ಷ ಯುವರಾಜ್ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಮಂಜುನಾಥ ರೇವಣ್ಕರ್ ವಂದಿಸಿದರು. ರಾಜ್ಯ ಸಮಿತಿ ಗೌರವ ಅಧ್ಯಕ್ಷ ಕೆ.ರಾಧಾಕೃಷ್ಣ ಶೆಣೈ ಇದ್ದರು. ಸ ನಿಲ್ ಪನ್ನೆಮಜಲು ನಿರೂಪಿಸಿದರು.


