ಸೌಜನ್ಯ ಪರ ಹೋರಾಟಗಾರರು ಮತ್ತು ಪೊಲೀಸರ ನಡುವೆ ವಾಗ್ವಾದ: ಐವರು ವಶಕ್ಕೆ

ಸೌಜನ್ಯ ಪರ ಹೋರಾಟಗಾರರು ಮತ್ತು ಪೊಲೀಸರ ನಡುವೆ ವಾಗ್ವಾದ: ಐವರು ವಶಕ್ಕೆ


ಮಂಗಳೂರು: ಸೌಜನ್ಯ ಪರ ಹೋರಾಟಗಾರರ ಮೇಲೆ ಸುಳ್ಳು ಕೇಸ್‌ಗಳನ್ನು ಹಾಕಿ ದಮನ ಮಾಡುವ ಕಾರ್ಯ ಮಾಡುತ್ತಿರುವ ಬಗ್ಗೆ ತಹಶೀಲ್ದಾರ್ ಅವರ ಮೂಲಕ ಸರಕಾರಕ್ಕೆ ಮನವಿ ನೀಡಲು ಬಂದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹಾಗೂ ಸೌಜನ್ಯ ಪರ ಹೋರಾಟಗಾರರು ಮತ್ತು ಪೊಲೀಸರ ನಡುವೆ ಇಂದು ವಾಗ್ವಾದ ನಡೆದು ಮನವಿ ನೀಡಲು ಬಂದ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ವರದಿಯಾಗಿದೆ.

ಬಳಿಕ ಸೌಜನ್ಯ ಪರ ಹೋರಾಟಗಾರ್ತಿ ಪ್ರಸನ್ನ ರವಿ ಹಾಗೂ ಸೌಜನ್ಯ ಅವರ ತಾಯಿ ಕುಸುಮಾವತಿ ನೇತೃತ್ವದಲ್ಲಿ ಮನವಿ ನೀಡಲು ತಾಲೂಕು ಕಚೇರಿಗೆ ತೆರಳಿದವರನ್ನು ಪೊಲೀಸರು ತಡೆದು ಮನವಿ ನೀಡಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು. ಆ ವೇಳೆ ತಾಲೂಕು ಕಚೇರಿಯ ಮುಂದೆಯೇ ಅವರು ಕುಳಿತು ಮನವಿ ನೀಡಿದ ಬಳಿಕವೇ ಹಿಂತಿರುಗುವುದಾಗಿ ಪ್ರಕಟಿಸಿದರು. ಬಳಿಕ ಮೂವರಿಗೆ ತೆರಳಿ ಮನವಿ ಸಲ್ಲಿಸಲು ಅವಕಾಶ ನೀಡಲಾಯಿತು.

ತಾಲೂಕು ಕಚೇರಿಯ ಟಪಾಲು ವಿಭಾಗದಲ್ಲಿ ಪ್ರಸನ್ನ ರವಿ, ಕುಸುಮಾವತಿ ಹಾಗೂ ಮೋಹನ್ ಶೆಟ್ಟಿ ತೆರಳಿ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಪ್ರಸನ್ನ ರವಿ ಅವರು, ಪೊಲೀಸರು ಉದ್ದೇಶ ಪೂರ್ವಕವಾಗಿ ಮನವಿ ನೀಡಲು ಅವಕಾಶ ನೀಡದೆ, ತಡೆಯುವ ಮೂಲಕ ಮೂಲಭೂತ ಹಕ್ಕನ್ನೇ ಕಸಿಯುವ ಪ್ರಯತ್ನ ನಡೆಸಿದ್ದಾರೆ. ಯಾವುದೇ ಪ್ರತಿಭಟನೆ ನಡೆಸಿಲ್ಲ, ಯಾವುದೆ ಗಲಾಟೆ ಮಾಡಿಲ್ಲ. ಆದರೆ ಪೊಲೀಸರು ಮನವಿ ನೀಡಲು ಬಂದವರನ್ನು ತಡೆದಿದ್ದಾರೆ. ಬೆಳ್ತಂಗಡಿಯಲ್ಲಿ ಮಾತ್ರ ಹೊಸ ಕಾನೂನು ಏನಾದರೂ ಇದೆಯೇ?. ಬೆಳ್ತಂಗಡಿ ಠಾಣೆಗೆ ನಾವು ದೂರು ನೀಡಿದರೆ ಕ್ರಮವೇ ಇಲ್ಲ. ಸೌಜನ್ಯ ಪರ ಹೋರಾಟಗಾರರ ಮೇಲೆ ಮಾತ್ರ ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸುವ ದಮನ ಮಾಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮನವಿ ನೀಡಲು ಬಂದವರನ್ನು ತಡೆದ ಬೆನ್ನಲ್ಲಿಯೇ ನೂರಾರು ಸಂಖ್ಯೆಯಲ್ಲಿ ಜನರು ಬೆಳ್ತಂಗಡಿ ತಾಲೂಕು ಕಚೇರಿಯ ಎದುರು ಜಮಾವಣೆಗೊಂಡಿದ್ದರು.

ಆರಂಭದಲ್ಲಿ ಮನವಿ ನೀಡಲು ತಾಲೂಕು ಕಚೇರಿಗೆ ಬಂದಿದ್ದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ತಡೆದಾಗ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. 

ಈ ವೇಳೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಪ್ರಜ್ವಲ್ ಗೌಡ ಕೆವಿ, ಪ್ರದೀಪ್, ರವೀಂದ್ರ ಶೆಟ್ಟಿ, ಶ್ರೀನಿವಾಸ, ಉದಯ ಕೊಯ್ಯೂರು ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಳಿಕ ಪೊಲೀಸರು ಬಿಡುಗಡೆ ಮಾಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article