ಸೃಜನ ಶೀಲ ಬರವಣಿಗೆಯ ಮೂಲ ಸೂಕ್ಷ್ಮ ವೀಕ್ಷಣೆ: ಖದೀಜತ್ ದಿಲ್ಶಾನಾ
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಆಂಗ್ಲ ಭಾಷಾ ವಿಭಾಗ ಮತ್ತು ಆಂತರಿಕ ಗುಣಮಟ್ಟಖಾತ್ರಿ ಕೋಶದ ವತಿಯಿಂದ ಹೆಸರಾಂತ ಆಂಗ್ಲಭಾಷಾ ಲೇಖಕ ಆರ್.ಕೆ. ನಾರಾಯಣನ್ ಅವರ ಹುಟ್ಟು ಹಬ್ಬದ ಸ್ಮರಣಾರ್ಥ ಆಯೋಜಿಸಲಾಗಿದ್ದ ಸೃಜನಾತ್ಮಕ ಬರವಣಿಗೆ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೃಜನಶೀಲ ಬರವಣಿಗೆಯಲ್ಲಿ ಕಥಾವಸ್ತು, ಪಾತ್ರವರ್ಗ, ಸಂಭಾಷಣೆ, ದೃಷ್ಟಿಕೋನ, ಅನುಕ್ರಮ ಕಾಪಾಡಿಕೊಳ್ಳುವುದು ಮಾತ್ರವಲ್ಲದೇ, ಕಥಾ ನಿರೂಪಣೆ ಹಾಗೂ ಶಬ್ದಗಳ ಬಳಕೆನಿರ್ಣಾಯಕವಾಗಿರುತ್ತದೆ. ಬರಹಗಾರರಿಗೆ ಸಾಮಾನ್ಯ ವಿಷಯಗಳೂ ಮುಖ್ಯವಾಗಿರುತ್ತವೆ. ಹಾಗಾಗಿ, ಸರಳ ವಿಷಯಗಳ ಮೇಲೆ ಕೇಂದ್ರೀಕರಿಸುವ ಮೂಲಕ ಉತ್ತಮ ಬರಹಗಾರರಾಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸೃಜನಶೀಲ ಬರವಣಿಗೆ ಆಲೋಚನೆ, ಕಥೆಗಳ ಜಗತ್ತಿನ ಜೊತೆಗೆ ಸಂಬಂಧ ಹೆಣೆಯುತ್ತದೆ. ಯಾವುದೇ ಕೃತಿಯಲ್ಲಿ ಕುತೂಹಲ ಅತ್ಯಂತ ಮುಖ್ಯವಾದ ವಿಷಯ. ಆಗಮಾತ್ರ ಅಲ್ಲಿರುವ ಕಥಾವಸ್ತು ಮನಸ್ಸನ್ನು ಮಾತ್ರವಲ್ಲ ದೇಹ-ಹೃದಯ ತಲುಪುತ್ತದೆ. ಸೃಜನಶೀಲತೆಗೆ ವಯಸ್ಸಿನ ಮಿತಿಯಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಮಾತನಾಡಿ, ವಿದ್ಯಾರ್ಥಿ ಹಂತದಲ್ಲೇ ಸೃಜನಶೀಲ ಬರವಣಿಗೆ ಮಾಡುವುದನ್ನು ಕಲಿಯುವುದು ಬಹಳ ಮುಖ್ಯ. ಬರವಣಿಗೆ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿರಬಹುದು ಅಥವಾ ಅದರ ಹೊರತಾದದ್ದೂ ಆಗಿರಬಹುದು. ಇದು ಸೃಜನಶೀಲ ಬರವಣಿಗೆ ಕೌಶಲ್ಯವನ್ನು ಹೆಚ್ಚಿಸುತ್ತದೆ. ಆ ಮೂಲಕ ಬರವಣಿಗೆ ಸಾಮರ್ಥ್ಯ ಗುರುತಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಪ್ರೊ. ಸುಭಾಷಿಣಿ ಶ್ರೀವತ್ಸಾ, ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.