ಕಾರಂತರದ್ದು ಬಹುಮುಖ ಪ್ರತಿಭೆ: ಮಮತಾ ಶೆಟ್ಟಿ
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತರ ಭವನದಲ್ಲಿ ಭಾಷಾ ಸಂಘ, ಗ್ರಂಥಾಲಯ, ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟಖಾತ್ರಿ ಕೋಶದ ಸಹಯೋಗದೊಂದಿಗೆ ಕಾರಂತ ನಮನ ಹಾಗೂ ಗ್ರಂಥಾವಲೋಕನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡವನ್ನು ಕೇವಲ ಭಾಷೆಯಾಗಿ ತೆಗೆದುಕೊಳ್ಳದೇ, ಅದರೊಂದಿಗೆ ವ್ಯವಸಾಯ ಮಾಡುವ ಮೂಲಕ ಉತ್ತಮ ಸಾಹಿತ್ಯಕಟ್ಟುವ ಮಹತ್ವದ ಕೆಲಸ ಮಾಡಿದರು. ಕಾರಂತರು ಸಾಹಿತಿ ಮಾತ್ರವಲ್ಲದೇ, ರಾಜಕೀಯಧುರೀಣ, ಪತ್ರಿಕೋದ್ಯಮಿ, ಸಿನೆಮಾ ನಟ ಹಾಗೂ ಯಕ್ಷಗಾನ ಕಲಾವಿದರಾಗಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರು ಪ್ರವೇಶಿಸದ ಸಾಹಿತ್ಯ ಕ್ಷೇತ್ರಗಳೇ ಇಲ್ಲ ಎಂದು ಹೇಳಿದರು.
ತನ್ನ ಪುಸ್ತಕಕ್ಕೆ ತಾನೇ ಮುಖಪುಟ ಚಿತ್ರ ಬರೆದ ಮೊಟ್ಟ ಮೊದಲ ಸಾಹಿತಿ. ಸಮಾಜದಲ್ಲಿ ಇರುವ ಜಾತಿತಾರತಮ್ಯ ಹೋಗಲಾಡಿಸಲು ಅಂತರ್ಜಾತೀಯ ವಿವಾಹ ಪ್ರೋತ್ಸಾಹಿಸಿದರು. ಅವರ ವಿಚಾರಧಾರೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಮಾತನಾಡಿ, ಕಾರಂತರು ವಿಜ್ಞಾನ, ತಂತ್ರಜ್ಞಾನ, ಕಲಾ ಕ್ಷೇತ್ರ ಹೀಗೆ ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿ ಕೊಳ್ಳುವ ಮೂಲಕ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದರು.
ಗ್ರಂಥಪಾಲಕಿ ಡಾ. ವನಜಾ, ಐಕ್ಯುಎಸಿ ಸಂಯೋಜಕ ಡಾ. ಸಿದ್ದರಾಜು ಎಂ.ಎನ್., ಭಾಷಾ ಸಂಘದ ಉಪನಿರ್ದೇಶಕಿ ಪ್ರೊ. ನಾಗರತ್ನ ರಾವ್., ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಲಕ್ಷ್ಮಿದೇವಿ ಎಲ್. ಉಪಸ್ಥಿತರಿದ್ದರು.