‘ಬುಕ್ ಬಫೆಟ್’ ಪುಸ್ತಕ ಮೇಳ ಉದ್ಘಾಟನೆ

‘ಬುಕ್ ಬಫೆಟ್’ ಪುಸ್ತಕ ಮೇಳ ಉದ್ಘಾಟನೆ


ಮಂಗಳೂರು: ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪದವಿ ಪೂರ್ವ ಕಾಲೇಜು ಶಕ್ತಿನಗರ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ‘ಬುಕ್ ಬಫೆಟ್’ ಪುಸ್ತಕ ಮೇಳದ ಉದ್ಘಾಟನಾ ಸಮಾರಂಭವು ಇಂದು ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಆಡಿಟೋರಿಯಂನಲ್ಲಿ ನಡೆಯಿತು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಲೇಖಕರು, ಸಮಾಜಶಾಸ್ತ್ರದ ನಿವೃತ್ತ ಉಪನ್ಯಾಸಕ ಡಾ. ಸಿ.ಎನ್. ಶಂಕರ್ ರಾವ್ ಚಾಲನೆ ನೀಡಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಪುಸ್ತಕಗಳನ್ನು ಹೇಗೆ ಪ್ರೀತಿಸಬೇಕು, ಪುಸ್ತಕಗಳ ಬಗ್ಗೆ ಹೇಗೆ ಒಲವು ಮೂಡಿಸಬೇಕು ಎಂಬುದಕ್ಕೆ ಇಂತಹ ಪುಸ್ತಕ ಮೇಳಗಳು ದಾರಿ ಮಾಡಿಕೊಡುತ್ತವೆ. ನಿರಂತರ ಪುಸ್ತಕಗಳನ್ನು ಓದುವುದರಿಂದ ನಾವು ಸಾಧಕರಾಗಬಹುದು ಎಂದು ಹೇಳಿದರು.


ಭಾರತವನ್ನು ಒಂದು ಶ್ರೇಷ್ಠ ದೇಶವೆಂದು ಜಗತ್ತಿಗೆ ಪರಿಚಯಿಸಿದ್ದೇ ನಮ್ಮ ಗ್ರಂಥಗಳು. ನಮ್ಮ ಜೊತೆ ಸದಾ ಶಾಶ್ವತವಾಗಿರುವ ಉತ್ತಮ ಗೆಳೆಯರೆಂದರೆ ಅದು ಪುಸ್ತಕಗಳು ಮಾತ್ರ. ತನ್ನರಿವೆ ತನಗೆ ಗುರು, ಅಂದರೆ ತನ್ನನ್ನು ತಾನು ಅರಿತವನು ಜೀವನದಲ್ಲಿ ಸಾಧಕನಾಗಬಲ್ಲ, ಹೀಗೆ ನಮ್ಮನ್ನು ನಾವು ಅರಿತುಕೊಳ್ಳುವುದರಲ್ಲಿ ಪುಸ್ತಕಗಳ ಪಾತ್ರ ಮಹತ್ತರವಾದದ್ದು. ಪುಸ್ತಕಗಳಿಗೆ ನಮ್ಮ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿಯಿದೆ. ವಿದ್ಯಾರ್ಥಿಗಳಾದ ತಾವೆಲ್ಲರೂ ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತಾಗಲಿ, ಆ ಮೂಲಕ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. 


ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಅವರು ಪ್ರತಿಯೊಂದೂ ಮನೆಯಲ್ಲಿಯು ಒಂದು ಸಣ್ಣ ಗ್ರಂಥಾಲಯ ಇದ್ದರೆ ಆ ಮನೆಗೊಂದು ಲಕ್ಷಣ, ಆ ಮೂಲಕ ಮಕ್ಕಳು ದಿನಾ ಪುಸ್ತಕಗಳನ್ನು ಓದಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದರು. 


ಈ ಸಂದರ್ಭದಲ್ಲಿ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡುವುದರ ಮೂಲಕ ಗೌರವಿಸಿದರು. ಶಕ್ತಿ ವಿದ್ಯಾ ಸಂಸ್ಥೆಯ ಮುಖ್ಯ ಸಲಹೆಗಾರ ರಮೇಶ್ ಕೆ., ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು.


ಶಕ್ತಿ ಪದವಿ ಪೂರ್ವ ಕಾಲೇಜಿನ ಗ್ರಂಥಪಾಲಕಿ ಲಕ್ಷ್ಮೀ ರೈ ಸ್ವಾಗತಿಸಿದರು. ಶಕ್ತಿ ವಸತಿ ಶಾಲೆಯ ಶಿಕ್ಷಕಿ ಶ್ವೇತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಮುಖ್ಯ ಅತಿಥಿಗಳು ‘ಬುಕ್ ಬಫೆಟ್’ ಪುಸ್ತಕ ಮೇಳವನ್ನು ರಿಬ್ಬನ್ ಕತ್ತರಿಸಿ ಅಧಿಕೃತವಾಗಿ ಉದ್ಘಾಟಿಸಿ ಪ್ರದರ್ಶಿಸಲ್ಪಟ್ಟ ಪುಸ್ತಕಗಳನ್ನು ವೀಕ್ಷಿಸಿದರು. ಈ ಪುಸ್ತಕ ಪ್ರದರ್ಶನದಲ್ಲಿ ವಿವಿಧ ವಿಭಾಗದ ವಿದ್ಯಾರ್ಥಿಗಳಿಗೆ ಉಪಯೋಗಕರವಾಗುವಂತಹ ಯಂಗ್ ರೀಡರ್, ಜೂನಿಯರ್ ರೀಡರ್, ಅರ್ಲಿ ರೀಡರ್ ಎನ್ಸೈಕ್ಲೋಪೀಡಿಯ, ಕಲರಿಂಗ್ ಹೀಗೆ ಹತ್ತು ಹಲವಾರು ವಿಧಗಳ ಪುಸ್ತಕಗಳನ್ನು ಪ್ರದರ್ಶಿಸಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ಕೆ.ಸಿ. ನಾಕ್ ಅವರು ಸೂಚಿಸಿದ್ದಾರೆ.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article