ಮಟ್ಟೆಣ್ಣನವರ್ ವಂಚನೆ: ಮಾನವ ಹಕ್ಕು ಅಯೋಗಕ್ಕೆ ಮಾಹಿತಿ
ಮಂಗಳೂರು: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಾನವಹಕ್ಕು ಅಧಿಕಾರಿ ಎಂದು ರೌಡಿಶೀಟರ್‌ನ್ನು ತೋರಿಸಿದ ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟೆಣ್ಣವರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳುವಂತೆ ಕೋರಿ ದ.ಕ. ಜಿಲ್ಲಾ ಪೊಲೀಸರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ ವೇಳೆ ಗಿರೀಶ್ ಮಟ್ಟೆಣ್ಣವರ್ ವಿರುದ್ಧ ಅಡ್ಡಿಪಡಿಸಿದ ಆರೋಪದಲ್ಲಿ ಕೇಸು ದಾಖಲಾಗಿತ್ತು. ಈ ವೇಳೆ ಠಾಣೆಗೆ ವಿಚಾರಣೆಗೆ ಹಾಜರಾದ ಸಂದರ್ಭ ಮಾನವಹಕ್ಕು ಅಧಿಕಾರಿ ಎಂದು ರೌಡಿಶೀಟರ್‌ನ್ನು ಮಟ್ಟೆಣ್ಣನವರ್ ತೋರಿಸಿದ್ದರು.
ಈ ಬಗ್ಗೆ ಆ.30ರಂದು ಬೆಳ್ತಂಗಡಿ ನಿವಾಸಿ ಪ್ರವೀಣ ಕೆ.ಆರ್. ಎಂಬವರು ದೂರು ನೀಡಿದ್ದರು. ಬಿಎನ್‌ಎಸ್ ಅಡಿಯಲ್ಲಿ 204, 319(2), 353(2) ಜೊತೆಗೆ 3(5) ಪ್ರಕರಣ ದಾಖಲಿಸಲಾಗಿತ್ತು. ಮದನ್ ಬುಗುಡಿ ಎಂಬ ರೌಡಿ ಶೀಟರ್‌ನ್ನು ಮಾಧ್ಯಮದ ಮುಂದೆ ಮಾನವಹಕ್ಕು ಅಧಿಕಾರಿ ಎಂದು ಮಟ್ಟೆಣ್ಣವರ್ ಪರಿಚಯಿಸಿದ್ದರು.
ಗಡಿಪಾರು ವಿಚಾರಣೆ ಮುಂದೂಡಿಕೆ..
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಕುರಿತ ಅರ್ಜಿಯ ವಿಚಾರಣೆಯನ್ನು ಬೆಂಗಳೂರು ಹೈಕೋರ್ಟ್ ಬುಧವಾರ ಅಕ್ಟೋಬರ್ 13ಕ್ಕೆ ಮುಂದೂಡಿದೆ. ಗಡಿಪಾರು ಆದೇಶದ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೆ.30ರಂದು ಹೈಕೋರ್ಟ್‌ನಿಂದ ಗಡಿಪಾರು ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ಲಭಿಸಿತ್ತು. ಈ ಕುರಿತ ಅರ್ಜಿಯನ್ನು ಬುಧವಾರ ಪರಿಶೀಲನೆ ನಡೆಸಿದ ನ್ಯಾಯಪೀಠ ಅಕ್ಟೋಬರ್ ೧೩ಕ್ಕೆ ಮುಂದೂಡಿದೆ.