ಧರ್ಮಸ್ಥಳ ಪ್ರಕರಣ: ಮೊಹಂತಿ ಆಗಮನ-ತನಿಖೆಯ ಮಾಹಿತಿ ಸಂಗ್ರಹ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿನ ಬುರುಡೆ ಪ್ರಕರಣದ ಎಸ್‌ಐಟಿ ತನಿಖೆಯ ಭಾಗವಾಗಿ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಅ.8ರ ಮಧ್ಯಾಹ್ನ ಸುಮಾರು 12.45ಕ್ಕೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಸಿದ್ದಾರೆ.
ಎಸ್.ಐ.ಟಿ ಕಚೇರಿಯಲ್ಲಿ ಬರುಡೆ ಪ್ರಕರಣದ ಕುರಿತು ಅಧಿಕಾರಿಗಳು ತನಿಖೆ ಮಾಡಿದ ಬಗ್ಗೆ ಸಭೆ ನಡೆಸಿರುವ ಅವರು, ವರದಿಯ ಮಾಹಿತಿ ಸಂಗ್ರಹಿಸಿದ ಬಳಿಕ ಮುಂದಿನ ತನಿಖೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಪ್ರಮುಖವಾಗಿ ಷಡ್ಯಂತ್ರ ರೂಪಿಸಿದವರ ವಿಚಾರಣೆಯ ಜತೆಗೆ ಒಂದಷ್ಟು ಮಂದಿಯನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಮೊಹಾಂತಿಯವರು ಕಳೆದ ಕೆಲ ದಿನಗಳಲ್ಲಿ ನಡೆದ ವಿಚಾರಣೆಗಳು, ಇತರ ಬೆಳವಣಿಗೆಗಳ ಕುರಿತು ಮಾಹಿತಿ ಸಂಗ್ರಹಿಸಿದ್ದು, ಜತೆಗೆ ವಿಚಾರಣೆಗೆ ಹಾಜರಾಗದೆ ಇರುವವರ ಕುರಿತು ಎಸ್‌ಐಟಿಯ ಮುಂದಿನ ನಿರ್ಧಾರ ಏನು ಎಂಬುದರ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ.
ಈಗಾಗಲೇ ಆಂಬುಲೆನ್ಸ್ ಚಾಲಕರಿಬ್ಬರ ವಿಚಾರಣೆ ನಡೆದಿದ್ದು, ತನಿಖೆಗೆಯ ಭಾಗವಾಗಿ ಮುಂದೆ ಯಾರ ವಿಚಾರಣೆ ನಡೆಯಬೇಕು ಎನ್ನುವುದು ತೀರ್ಮಾನವಾಗಲಿದೆ. ಕೆಲವೊಂದು ಯುಟ್ಯೂಬರ್‌ಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಅವರು ಯಾರೂ ವಿಚಾರಣೆಗೆ ಹಾಜರಾಗಿಲ್ಲ. ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಷಡ್ಯಂತ್ರ ರೂಪಿಸಿದವರ ಪಟ್ಟಿ ಎಸ್ ಐಟಿಯ ಮುಂದಿದ್ದು, ಅದರಲ್ಲಿ ಯಾರನ್ನು ವಿಚಾರಣೆ ನಡೆಸಬೇಕು, ಅಗತ್ಯವಿದ್ದರೆ ಯಾರನ್ನು ವಶಕ್ಕೆ ಪಡೆಯಬೇಕು ಅಥವಾ ಬಂಧಿಸಬೇಕು ಎನ್ನುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಆರೋಪಪಟ್ಟಿ ಸಾಧ್ಯತೆ..
ಜೈಲಿನಲ್ಲಿರುವ ಚಿನ್ನಯ್ಯನ ಬುರುಡೆ ಪ್ರಕರಣ ತನಿಖೆ ಅಂತಿಮ ಘಟ್ಟಕ್ಕೆ ತಲುಪಿದೆ. ಜುಲೈ 25 ರಿಂದ ಈವರೆಗಿನ ಅಂತಿಮ ವರದಿ ತಯಾರಿಸುವ ಪ್ರಕ್ರಿಯೆಯಲ್ಲಿರುವ ಎಸ್‌ಐಟಿ ಎಲ್ಲಾ ದಾಖಲೆ, ಹಲವು ಸಾಕ್ಷ್ಯ ಹಾಗೂ ಹೇಳಿಕೆ ದಾಖಲು ಪ್ರಕ್ರಿಯೆ ಪೂರ್ಣಗೊಳಿಸಿದೆ. ಬುರುಡೆ ಚಿನ್ನಯ್ಯನ ಪ್ರಕರಣದಲ್ಲಿ ಅ.30ರ ಒಳಗಡೆ ಆರೋಪ ಪಟ್ಟಿ ತಯಾರಿಗೆ ಸಿದ್ಧತೆ ನಡೆದಿದ್ದು, ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗಲಿದೆ ಎನ್ನಲಾಗಿದೆ.