ಪುಸ್ತಕ ಓದಿ ವಾಸ್ತವ ಅರಿಯದಿದ್ದರೆ ಸಿಕ್ಕ ಸ್ವಾತಂತ್ರ್ಯ ವ್ಯರ್ಥ: ಪ್ರೊ. ಗಣಪತಿ ಗೌಡ

ಪುಸ್ತಕ ಓದಿ ವಾಸ್ತವ ಅರಿಯದಿದ್ದರೆ ಸಿಕ್ಕ ಸ್ವಾತಂತ್ರ್ಯ ವ್ಯರ್ಥ: ಪ್ರೊ. ಗಣಪತಿ ಗೌಡ


ಮಂಗಳೂರು: ಆಧುನಿಕ ಮಾಹಿತಿ ತಂತ್ರಜ್ಞಾನ ಯುಗದಲ್ಲಿರುವ ನಮ್ಮ ಸಮಾಜ ಪುಸ್ತಕ ಓದುವ ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ. ಪುಸ್ತಕ ಓದಿ ಎಲ್ಲಾ ವಿಚಾರಗಳನ್ನು ಸ್ಪಷ್ಟವಾಗಿ ತಿಳಿದುಕೊಂಡು ಸಾಮಾಜಿಕ ಸಮಸ್ಯೆಗಳಿಗೆ ನ್ಯಾಯಸಮ್ಮತವಾಗಿ ಸ್ಪಂದಿಸದಿದ್ದರೆ ನಮಗೆ ಸಿಕ್ಕಿದ ಸ್ವಾತಂತ್ರ್ಯವನ್ನು ನಾವು ದುರುಪಯೋಗಪಡಿಸಿಕೊಂಡಂತೆ ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲ ಪ್ರೊ. ಗಣಪತಿಗೌಡ ಆತಂಕ ವ್ಯಕ್ತಪಡಿಸಿದರು.

ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿನ ಗ್ರಂಥಾಲಯ, ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯುಎಸಿ) ಹಾಗೂ ಇತಿಹಾಸ ವಿಭಾಗದ ಸಹಯೋಗದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ಶನಿವಾರ ಕಾಲೇಜಿನ ಗ್ರಂಥಾಲಯದಲ್ಲಿ ಆಯೋಜಿಸಲಾಗಿದ್ದ, ‘ಪುಸ್ತಕ ಪ್ರದರ್ಶನ ಮತ್ತು ಪುಸ್ತಕ ವಿಮರ್ಶೆ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾತ್ಮ ಗಾಂಧಿಯಂತಹ ಮಹನೀಯರು ಇಂದು ಅಂತಾರಾಷ್ಟ್ರೀಯ ವ್ಯಕ್ತಿಯಾಗಿ ಏಕೆ ಗುರುತಿಸಿಕೊಂಡಿದ್ದಾರೆ ಎಂಬ ವಾಸ್ತವದ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಾದರೆ ಅವರ ಕುರಿತಾದ ಪುಸ್ತಕಗಳನ್ನು ಓದಿ ತಿಳಿದುಕೊಂಡರೆ ಮಾತ್ರ ಸಾಧ್ಯ ಎಂದು ತಿಳಿಸಿದರು. 

ಪುಸ್ತಕಗಳನ್ನು ಓದಿ ವಾಸ್ತವಾಂಶವನ್ನು ಅರಿತುಕೊಳ್ಳದಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸ್ವಹಿತಾಸಕ್ತಿ ಶಕ್ತಿಗಳ ಪ್ರಚೋದನಾಕಾರಿ ಹೇಳಿಕೆಗಳನ್ನೇ ಸತ್ಯವೆಂದು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆಯಿರುತ್ತದೆ ಹಾಗಾಗಿ ಪುಸ್ತಕ ಓದುವುದನ್ನು ದೈನಂದಿನ ಚಟುವಟಿಕೆಯಾಗಿ ಮಾರ್ಪಡಿಸಿಕೊಳ್ಳಬೇಕು ಎಂದರು.

ಜ್ಞಾನಾರ್ಜನೆ ಹಾಗೂ ವಸ್ತುನಿಷ್ಟ ವಿಶ್ಲೇಷಣೆಯ ಉದ್ದೇಶದಿಂದಾಗಿ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸಮಾಜ ಸುಧಾರಕ ನಾರಾಯಣ ಗುರು ಪ್ರಶ್ನೆಗಳನ್ನು ಕೇಳುತ್ತಾ ಬೆಳೆದವರು. ಹಾಗಾಗಿಯೇ ಅವರು ಸಮಾಜದಲ್ಲಿದ್ದ ಮೌಢ್ಯಗಳನ್ನು ಹೋಗಲಾಡಿಸಿ, ಅಮಾನವೀಯತೆ, ಮಹಿಳಾ ದೌರ್ಜನ್ಯ, ಶೋಷಣೆಯ ವಿರುದ್ಧ ಹೋರಾಟ ರೂಪಿಸಿ ಪರಿಹಾರ ತೋರಿದ ಸಮಾಜ ಸುಧಾರಕರಾದರು. ಈ ಎಲ್ಲಾ ಮಾಹಿತಿಗಳು ನಮಗೆ ಪುಸ್ತಕ ಓದುವಿನಿಂದ ಮಾತ್ರ ಸಿಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಪ್ರಾದ್ಯಾಪಕ ಡಾ. ಜಯವಂತ್ ನಾಯಕ್, ಇತಿಹಾಸ ವಿಭಾಗದ ಪ್ರಾದ್ಯಾಪಕ ಡಾ. ಜಯರಾಜ್, ಗ್ರಂಥಪಾಲಕಿ ಡಾ. ವನಜಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮಹಾತ್ಮ ಗಾಂಧಿ ಮತ್ತು ನಾರಾಯಣ ಗುರು ಅವರ ಪುಸ್ತಕಗಳನ್ನು ಓದಿ ವಿಮರ್ಶಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article