ಸಂಪೂರ್ಣ ಪರಿಶ್ರಮದಿಂದ ಸಾಧನೆ ಸುಲಭ: ಧನರಾಜ್ ಪಿಳ್ಳೆ

ಸಂಪೂರ್ಣ ಪರಿಶ್ರಮದಿಂದ ಸಾಧನೆ ಸುಲಭ: ಧನರಾಜ್ ಪಿಳ್ಳೆ


ಮಂಗಳೂರು: ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಪರಿಶ್ರಮದೊಂದಿಗೆ ಸಾಧನೆ ಸುಲಭ. ಕ್ರೀಡಾಪಟುಗಳು ಸಾಧನೆಯಲ್ಲಿ ಮುನ್ನಡೆದು ಏಕಲವ್ಯ, ಅರ್ಜುನ, ಖೇಲ್‌ರತ್ನದಂತಹ ಪ್ರಶಸ್ತಿಗಳನ್ನು ಪಡೆಯುವಂತಾಗಬೇಕು ಎಂದು ಭಾರತೀಯ ಹಾಕಿ ತಂಡದ ಮಾಜಿ ನಾಯಕ, ಒಲಿಂಪಿಯನ್ ಹಾಕಿ ಕ್ರೀಡಾಪಟು, ಲಕ್ಷ್ಯಣ್ ಕ್ರೀಡಾ ಅಕಾಡೆಮಿ ಜಂಟಿ ನಿರ್ದೇಶಕ ಧನರಾಜ್ ಪಿಳ್ಳೆ ಹೇಳಿದರು.

ನಗರದ ಮಂಗಳಾ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಮಂಗಳಾ ಕ್ರೀಡಾಂಗಣದ ಕಾರ್ಪೋರೇಶನ್ ಈಜುಕೊಳದಲ್ಲಿ  ಭಾನುವಾರ ರಾಜ್ಯಮಟ್ಟದ ಮೆಡಲಿಸ್ಟ್ ಹಾಗೂ ನಾನ್ ಮೆಡಲಿಸ್ಟ್ ಈಜು ಸ್ಪರ್ಧೆ ಸ್ವಿಮ್ ಗಾಲಾ-2025ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಧನೆ ಮಾಡಬೇಕಾದರೆ ಮಕ್ಕಳಲ್ಲಿ ಆಸಕ್ತಿಯ ಜತೆಗೆ ಪೋಷಕರ ಬೆಂಬಲ ಅಗತ್ಯ. ನನ್ನ ತಾಯಿಯ ಪ್ರೋತ್ಸಾಹ ಹಾಗೂ ಬೆಂಬಲದಿಂದ ನನಗೆ ಕ್ರೀಡೆಯಲ್ಲಿ ಸಾಧನೆ  ಮಾಡಲು ಸಾಧ್ಯವಾಗಿದೆ. ಮಂಗಳೂರಿನಲ್ಲಿ ನಡೆಯುತ್ತಿರುವ ಈಜು ಸ್ಪರ್ಧೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಪೋಷಕರು ಕೂಡ ಮಕ್ಕಳಿಗೆ  ಬೆಂಬಲ ನೀಡುತ್ತಿರುವುದು ಉತ್ತಮ ಬೆಳೆವಣಿಗೆ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಮಂಗಳೂರಿನಲ್ಲಿ ಈಜುಪಟುಗಳಿಗೆ ಉತ್ತಮ ಅವಕಾಶಗಳಿದ್ದು, ಅವುಗಳನ್ನು ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಮಂಗಳಾ ಸ್ವಿಮ್ಮಿಂಗ್ ಕ್ಲಬ್ ಅಧ್ಯಕ್ಷ ಪ್ರಮುಖ್ ರೈ ಅಧ್ಯಕ್ಷತೆ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಲಕ್ಷ್ಯಣ್ ಕ್ರೀಡಾ ಅಕಾಡೆಮಿಯ ಸಹ ಸಂಸ್ಥಾಪಕ ಜೀವನ್ ಮಹಾದೇವ್, ಬಂಟರ ಯಾನೆ ನಾಡವರ ಮಾತೃ  ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಪನಮಾ ಸಂಸ್ಥೆಯ ಚೇರ್‌ಮೆನ್ ವಿವೇಕ್ ರಾಜ್ ಪೂಜಾರಿ, ದ.ಕ. ಸ್ವಿಮ್ಮಿಂಗ್ ಅಸೋಸಿಯೇಶನ್ ಅಧ್ಯಕ್ಷ ಯತೀಶ್ ಬೈಕಂಪಾಡಿ ಶುಭ ಹಾರೈಸಿದರು.

ಮಂಗಳಾ ಸ್ವಿಮ್ಮಿಂಗ್ ಕ್ಲಬ್ ಕಾರ್ಯದರ್ಶಿ ಎಂ. ಶಿವಾನಂದ್ ಗಟ್ಟಿ, ಮುಖ್ಯ ಈಜು ತರಬೇತುದಾರ ಶಿಶಿರ್ ಎಸ್. ಗಟ್ಟಿ, ತರಬೇತುದಾರ ರಾಜೇಶ್ ಖಾರ್ವಿ, ದಿನೇಶ್ ಕುಂದರ್, ಕೋಶಾಧಿಕಾರಿ ಧನಂಜಯ್ ಶೆಟ್ಟಿ ಇದ್ದರು. 

ಆಶಾ ಶೆಟ್ಟಿ ವಂದಿಸಿ, ಚೈತ್ರಾ ಎಂ. ರಾವ್ ನಿರೂಪಿಸಿದರು.

ಪ್ರತ್ಯೇಕ ಸ್ಪರ್ಧೆ: 

6 ವರ್ಷ ಮೇಲ್ಪಟ್ಟಮಕ್ಕಳಿಂದ ಹಿಡಿದು ಹಿರಿಯ ಈಜುಪಟುಗಳು ಸಹಿತ ವಿವಿಧ ವಯೋಮಾನದ 18 ವಿಭಾಗಗಳಲ್ಲಿ ಬಾಲಕ, ಬಾಲಕಿಯರ  ಸ್ಪರ್ಧೆಗಳು ನಡೆದವು. ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಹುಬ್ಬಳ್ಳಿ, ಹಾಸನ, ಬಿಜಾಪುರ, ದ.ಕ., ಉಡುಪಿ ಜಿಲ್ಲೆಗಳಿಂದ ಸ್ಪರ್ಧಾಳುಗಳು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article