ಐದಕ್ಕೂ ಹೆಚ್ಚು ಯೂಟ್ಯೂಬರ್‌ಗಳಿಗೆ ಎಸ್‌ಐಟಿ ನೋಟಿಸ್
ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತ ಶವ ಹೂತಿಟ್ಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ ವಿಡಿಯೋ ಮಾಡಿದ್ದ ಸಮೀರ್ ಎಂ.ಡಿ. ಸೇರಿದಂತೆ ಐದಕ್ಕೂ ಹೆಚ್ಚು ಯೂಟ್ಯೂಬರ್‌ಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಬುರುಡೆ ಪ್ರಕರಣದಲ್ಲಿ ಬಂಧಿತ ಆರೋಪಿ ಚೆನ್ನಯ್ಯನ ಹೇಳಿಕೆ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನೋಟಿಸ್ ಹಿನ್ನೆಲೆಯಲ್ಲಿ ಸಂಚಾರಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ನ ಸಂತೋಷ್ ಎಸ್‌ಐಟಿ ಮುಂದೆ ಶುಕ್ರವಾರ ಹಾಜರಾಗಿದ್ದಾರೆ. ಬುರುಡೆ ಚಿನ್ನಯ್ಯ, ಸುಜಾತ ಭಟ್ ಸೇರಿದಂತೆ ಕೆಲವರನ್ನು ಸಂತೋಷ್ ಸಂದರ್ಶನ ನಡೆಸಿದ್ದರು.
ಈ ಮಧ್ಯೆ ಅನಾಥ ಶವಗಳ ಹೂಳಿದ ಪ್ರಕ್ರಿಯೆ ಸರಿಯಾಗಿ ನಡೆಸಿಲ್ಲ ಎಂಬ ಆರೋಪಕ್ಕೆ ಒಳಗಾದ ಧರ್ಮಸ್ಥಳ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗೂ ನೋಟಿಸ್ ನೀಡಲಾಗಿದ್ದು, ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ.
ಶವ ಹೂತಿಟ್ಟ ಪ್ರಕರಣದಲ್ಲಿ ಬೆಂಗಳೂರಿನ ಮನೆಯಲ್ಲಿ ಚಿನ್ನಯ್ಯನ ವಿಡಿಯೋ ಮಾಡಿದ ವಿಚಾರದಲ್ಲಿ ದೂರುದಾರ ಜಯಂತ್ ಕುಟುಂಬಕ್ಕೂ ಎಸ್‌ಐಟಿ ನೋಟಿಸ್ ಜಾರಿಗೊಳಿಸಿದೆ. ಜಯಂತ್‌ನ ಪುತ್ರ, ಪುತ್ರಿ ಹಾಗೂ ಪತ್ನಿಗೂ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.