ದ.ಕ. ಜಿಲ್ಲೆ ಬಯಲು ಕಸ ಮುಕ್ತಗೊಳಿಸಿ: ಜನ ಶಿಕ್ಷಣ ಟ್ರಸ್ಟ್ ಜಿಲ್ಲಾಧಿಕಾರಿಗೆ ಮನವಿ
ಮಂಗಳೂರು: ದ.ಕ. ಜಿಲ್ಲೆಯನ್ನು ಬಯಲು ಕಸ ಮುಕ್ತಗೊಳಿಸಿ ಸಂಪೂರ್ಣ ಸ್ವಚ್ಛ ಮಾದರಿ ಜಿಲ್ಲೆಯನ್ನಾಗಿ ರೂಪಿ ಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜನ ಶಿಕ್ಷಣ ಟ್ರಸ್ಟ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಮುಖ್ಯಮಂತ್ರಿಯವರು ನೀಡಿದ ಸೂಚನೆಯಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಬಯಲು ಕಸ ಹಾಕುವ ಜಾಗ ಗಳನ್ನು ಗುರುತಿಸಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಿರ್ವಹಿಸಿ ಏಕ ಬಳಕೆ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲು ರಾಜ್ಯದ ಎಲ್ಲಾ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ಗಳಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹ. ಅದರಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕಸ ವನ್ನು ಮೂಲದಲ್ಲೇ ವಿಂಗಡಿಸುವುದನ್ನು ಖಾತರಿಪಡಿಸಲು ಮನೆ ಮತ್ತು ವಾಣಿಜ್ಯ ಅಂಗಡಿ ಮಳಿಗೆಗಳ ಮುಖ್ಯಸ್ಥ ರಿಂದ ಸ್ವಚ್ಚತಾ ಸ್ವಯಂ ಘೋಷಣೆ ಪತ್ರ ಪಡೆಯುವ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದು ಜಿಲ್ಲೆಯ ಸುಸ್ಥಿರ ಸ್ವಚ್ಛತೆಯ ಕಾರ್ಯ ಸಾಧನೆಗೆ ಪೂರಕ ಮತ್ತು ಪ್ರೇರಕವಾಗಿದೆ.
ಜಿಲ್ಲೆಯಲ್ಲಿ ಸಂಪೂರ್ಣ ಸ್ವಚ್ಚತಾ ಆಂದೋಲನ, ಸ್ವಚ್ಚ ಭಾರತ ಅಭಿಯಾನ ಚಟುವಟಿಕೆಗಳು ಕಳೆದ 20 ವರ್ಷ ಗಳಿಂದ ನಿರಂತರವಾಗಿ ನಡೆಯುತ್ತಿವೆ. ಜಿಲ್ಲೆಯ ಎಲ್ಲಾ ಗ್ರಾ.ಪಂ., ನಗರ ಸ್ಥಳೀಯ ಆಡಳಿತ ಸಂಸ್ಥೆಗಳ ಮಟ್ಟದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕಗಳು, ಸ್ವಚ್ಚ ಸಂಕೀರ್ಣಗಳು ಹಾಗೂ ಆಯ್ದ ಸ್ಥಳಗಳಲ್ಲಿ ಒಣ ಕಸವನ್ನು ಸಂಪನ್ಮೂಲ ವಾಗಿ ಪರಿವರ್ತಿಸುವ ಎಂಆರ್‌ಎಫ್ ಘಟಕಗಳು ರಾಜ್ಯಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೂ ಜಿಲ್ಲೆಯ ವಿವಿಧ ಕಡೆ ಎಲ್ಲೆಂದರಲ್ಲಿ ಕಸ ಎಸೆಯುವ ಮತ್ತು ಸುಡುವ ಸುದ್ದಿಗಳು ದಿನಪತ್ರಿಕೆ ಹಾಗೂ ಜಾಲತಾಣಗಳಲ್ಲಿ ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸರಕಾರದ ಆದೇಶ ಮತ್ತು ಉಸ್ತುವಾರಿಸಚಿವರು ನೀಡಿದ ಸೂಚನೆ ಯನ್ನು ಜಾರಿಗೊಳಿಸಬೇಕು ಎಂದು ಜಿಲ್ಲಾ ಸ್ವಚ್ಛತಾ ರಾಯಭಾರಿಯೂ ಆಗಿರುವ ಜನಶಿಕ್ಷಣ ಟ್ರಸ್ಟ್ನ ಎನ್. ಶೀನಶೆಟ್ಟಿ ಜಿಲ್ಲಾಧಿಕಾರಿಗೆ ಬರೆದಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.