ನಿರಂತರ ಪ್ರಯತ್ನದಿಂದ ತಮ್ಮನ್ನು ತಾವು ಸಮರ್ಥ ವ್ಯಕ್ತಿಗಳಾಗಿ ರೂಪಿಸಬೇಕು: ಡಾ. ಸುರೇಶ್ ಪೂಜಾರಿ
ಅವರು ಅ.14 ರಂದು ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ತರಬೇತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸ್ನಾತಕೋತ್ತರ ಪದವಿಯು ವಿದ್ಯಾರ್ಥಿಗಳಿಗೆ ಅಧ್ಯಾಪಕ ವೃತ್ತಿಯ ಸುಂದರ ಅವಕಾಶವನ್ನು ದೊರಕಿಸುತ್ತದೆ. ಆಧುನಿಕ ಉದ್ಯೋಗ ಮಾರುಕಟ್ಟೆಯಲ್ಲಿ ಹಲವು ಅವಕಾಶಗಳು ನಾವೀನ್ಯ ಕ್ಷೇತ್ರದಲ್ಲಿ ತೆರೆಯುತ್ತಿದ್ದು, ವಿದ್ಯಾರ್ಥಿಗಳು ಕೃತಕ ಬುದ್ದಿಮತ್ತೆ, ವ್ಯವಹಾರ ವಿಶ್ಲೇಷಣೆ, ಹಣಕಾಸಿನ ವಿಶ್ಲೇಷಣೆ, ಮಾರುಕಟ್ಟೆ ವಿಶ್ಲೇಷಣೆ, ಮಾನವ ಸಂಪನ್ಮೂಲ ವಿಶ್ಲೇಷಣೆ, ಡೇಟಾ ನಿರ್ವಹಣೆ, ಡೇಟಾ ದೃಶ್ಯೀಕರಣ ಮತ್ತು ಮುನ್ಸೂಚಕ ಮಾಡೆಲಿಂಗ್ ಇತ್ಯಾದಿಗಳ ಕುರಿತ ಆಧ್ಯಯನವನ್ನು ಕೈಗೂಳ್ಳಲು ಪ್ರೇರೇಪಿಸಿದರು. ಜೊತೆಗೆ, ವಿವಿಧ ಸ್ಪರ್ಧಾತ್ಮಾಕ ಪರೀಕ್ಷೆಯನ್ನು ಬರೆಯಲು ಯೋಜನೆಯನ್ನು ಸಿದ್ದಪಡಿಸುವಂತೆ ಮಾರ್ಗದರ್ಶನ ನೀಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ. ಮಾತನಾಡಿ, ಕಾಲೇಜಿನ ಸೌಲಭ್ಯಗಳು, ನೀತಿ ನಿಯಮಗಳನ್ನು ವಿವರಿಸಿ ಪಾಲಿಸಲು ಸೂಚಿಸಿದರು. ವಿದ್ಯಾರ್ಥಿ ಜೀವನದಲ್ಲಿ ಶಿಸ್ತಿನ ಮಹತ್ವವನ್ನು ವಿವರಿಸಿ ಕಲಿಕೆಯ ಜೊತೆಗೆ ಉತ್ತಮ ವ್ಯಕ್ತಿತ್ವ ನಿರ್ಮಾಣದ ಕಡೆಗೆ ಗಮನ ಹರಿಸಲು ಸೂಚಿಸಿದರು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕ ದೇವಿಪ್ರಸಾದ್ ಅವರು ಸೈಬರ್ ಸುರಕ್ಷೆ, ರ‍್ಯಾಗಿಂಗ್ ತಡೆ ಮತ್ತು ಮಾದಕ ದ್ರವ್ಯ ಬಳಕೆ ತಡೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಲೋಕೇಶ್‌ನಾಥ್ ಬಿ. ಮಾದಕ ದ್ರವ್ಯ ಸೇವನೆ ತಡೆ ಕುರಿತು ಪ್ರತಿಜ್ಞೆ ವಿಧಿ ನೆರವೇರಿಸಿದರು.
ಸಮಾಜ ಕಾರ್ಯ ವಿಭಾಗದ ಸಂಯೋಜಕಿ ಅರುಣ ಕುಮಾರಿ ಕಾರ್ಯಕ್ರಮವನ್ನು ಸಂಘಟಿಸಿದರು. ರಾಜ್ಯಶಾಸ್ತ್ರ ವಿಭಾಗದ ಸಂಯೋಜಕಿ ನಸೀಮಾ ಬೇಗಂ ಮತ್ತು ಇತರ ಬೋಧಕರು ಉಪಸ್ಥಿತರಿದ್ದರು.
ಪ್ರಥಮ ಎಂ.ಎಸ್.ಡಬ್ಲ್ಯೂ ದೀಕ್ಷಾ ಮತ್ತು ಬಳಗ ಪ್ರಾರ್ಥಿಸಿದರು. ಪ್ರಥಮ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಶ್ರೇಯಾ ಕಾರ್ಯಕ್ರಮ ನಿರ್ವಹಿಸಿದರು. ದ್ವಿತೀಯಾ ಎಂ.ಕಾಂ ವಿದ್ಯಾರ್ಥಿ ದಿಕ್ಷೀತ್ ವಂದಿಸಿದರು.