ರೋವರ್ ಮತ್ತು ರೇಂಜರ್ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ಮತ್ತು ನಾಯಕತ್ವ ನಿರ್ಮಾಣ: ಪ್ರತೀಮ್ ಕುಮಾರ್ ಕೆ.ಎಸ್.
Wednesday, October 15, 2025
ಮಂಗಳೂರು: ರೋವರ್ ಮತ್ತು ರೇಂಜರ್ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ಭಾರತ್ ಸ್ಕೌಟ್ ಗೈಡ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಪ್ರತೀಮ್ ಕುಮಾರ್ ಕೆ.ಎಸ್. ಹೇಳಿದರು.
ಅವರು ಶನಿವಾರ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ರೋವರ್ ಮತ್ತು ರೇಂಜರ್ ಘಟಕದ ಅಭಿವಿನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೋವರ್ ಮತ್ತು ರೇಂಜರ್ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸುವುದರಿಂದ ಸಮಾಜದಲ್ಲಿ ಉತ್ತಮ ಪ್ರಜೆ ಆಗುವುದರಿಂದಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ಅವಕಾಶಕ್ಕೂ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಮಾತನಾಡಿ, ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸಿ ಒಳ್ಳೆಯ ವಿಚಾರಗಳನ್ನು ಅರಿತುಕೊಂಡು ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ರೋವರ್ ಮತ್ತು ರೇಂಜರ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಸಹ-ಸಂಯೋಜಕಿ ಡಾ. ಜ್ಯೋತಿಪ್ರಿಯಾ, ರೇಂಜರ್ ಲೀಡರ್ ಡಾ. ಅಪರ್ಣಾ ಆಳ್ವ ಎನ್., ರೋವರ್ ಲೀಡರ್ ಮಹಮ್ಮದ್ ಇಕ್ಬಲ್ ಉಪಸ್ಥಿತರಿದ್ದರು.
ಪ್ರಿಯಾ ಮತ್ತು ಬಳಗದವರು ಪ್ರಾರ್ಥನೆ ನೆರವೇರಿಸಿದರು. ವಿದ್ಯಾರ್ಥಿನಿ ದೈವಿಕಾ ಸ್ವಾಗತಿಸಿದರು. ಅಕ್ಷರ ನಿರೂಪಿಸಿ, ಕಾವ್ಯ ವಂದಿಸಿದರು.


