ಅನಿವಾಸಿ ಕನ್ನಡಿಗರ ಸಮ್ಮೇಳನ: ಕನ್ನಡ ಸಂಸ್ಥೆಗಳಿಗೆ ಸಹಾಯಧನದ ಪ್ರೋತ್ಸಾಹ ಬೇಕು
ಮಂಗಳೂರು: ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳಿಗೆ ರಾಜ್ಯ ಸರಕಾರ ಸಹಾಯಧನ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಶನ್‌ನ ಅಧ್ಯಕ್ಷ ಬಸವರಾಜ್ ಗುರಿಕಾರ್ ಹೇಳಿದರು.
ನಗರದ ಕುದ್ಮುಲ್ ರಂಗರಾವ್ ಪುರಭವನದ ದಿ. ಪ್ರಪಭಾಕರ ಅಂಬಲತೆರೆ ಶಾರ್ಜಾ ಸ್ಮರಣಾರ್ಥ ವೇದಿಕೆಯಲ್ಲಿ ಆಯೋಜಿಸಲಾದ ಅನಿವಾಸಿ ಕನ್ನಡಿಗರ ದ್ವಿತೀಯ ಸಮ್ಮೇಳನ ಹಾಗೂ ಹೊರನಾಡ ಕನ್ನಡಿಗರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಉಳಿಸುವ ನಿಟ್ಟಿನಲ್ಲಿ ಮಂಜುನಾಥ್ ಎಜುಕೇಶನ್ ಟ್ರಸ್ಟ್ ಹಾಗೂ ಎಸ್.ಕೆ. ಮುನಿಸಿಪಿಲ್ ಎಂಪ್ಲಾಯಿಸ್ ಯೂನಿಯನ್ ಸಹಭಾಗಿತ್ವದಲ್ಲಿ ಆಯೋಜಿಸಲಾದ ಇಂತಹ ಕಾರ್ಯಕ್ರಮ ಸಂಚನಲ ಮೂಡಿಸಿದೆ ಎಂದರು.
ಕನ್ನಡ ದೇಶದ ಬೇರೆ ರಾಜ್ಯಗಳಲ್ಲಿ ಹಾಗೂ ಪ್ರಪಂಚದ ಇತರ ರಾಜ್ಯಗಳಲ್ಲಿ ಉಳಿಯಬೇಕು. ಅದಕ್ಕಾಗಿ ಇಂತಹ ಕಾರ್ಯಕ್ರಮಗಳು ಪೂರಕ ಎಂದವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಹೊರರಾಜ್ಯ ಹಾಗೂ ಹೊರನಾಡಿನಲ್ಲಿದ್ದುಕೊಂಡು ಸಾಮಾಜಿಕ ಚಟುವಟಿಕೆಗಳ ಮೂಲಕ ಗಮನ ಸೆಳೆದಿರುವ ಐವರು ದಂಪತಿಯನ್ನು ‘ಗೋಲ್ಡನ್ ಕಪಲ್’ ಗೌರವ ನೀಡಿ ಸನ್ಮಾನಿಸಲಾಯಿತು.
ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಭಾಗವಹಿಸಿ ಶುಭ ಹಾರೈಸಿದರು.
ಯುಎಇ ದುಬೈನ ಅನಿವಾಸಿ ಕನ್ನಡಿಗ ಲೆ.ಜನರಲ್ ಡಾ. ಡೆವಿಡ್ ಫ್ರಾಂಕ್ ಫೆರ್ನಾಂಡಿಸ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಮಂತ್ರಿತರಾಗಿ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನದ ಸಮೇಳನಾಧ್ಯಕ್ಷ ಸರ್ವೋತ್ತಮ ಶೆಟ್ಟಿ, ಗುರುಬೆಳದಿಂಗಳು ವೇದಿಕೆಯ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ರಾಮ್ ಕೆ. ಶಿರೂರು, ರಾಧಾಕೃಷ್ಣ ಶೆಟ್ಟಿ, ಯೋಗೀಶ್ ಶೆಟ್ಟಿ ಉಪಸ್ಥಿತರಿದ್ದರು.
ಅನಿವಾಸಿ ಕನ್ನಡಿಗರ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.