ಮಂಗಳೂರು ಜನತೆಗೆ ಸಮಸ್ಯೆ ತಂದೊಡ್ಡಿದ ಅವೈಜ್ಞಾನಿಕ ಸಮೀಕ್ಷೆ: ಶಾಸಕ ಕಾಮತ್
ಮಂಗಳೂರು ಮಹಾನಗರ ಪಾಲಿಕೆ, ತಾಲೂಕು ಕಚೇರಿ ಸೇರಿದಂತೆ ಎಲ್ಲಾ ಇಲಾಖೆಯ ಡಾಟಾ ಎಂಟ್ರಿ ಆಪರೇಟರ್ ಗಳು, ಕಿರಿಯ ಇಂಜಿನಿಯರ್ ಗಳ ಗ್ರಾಮ ಲೆಕ್ಕಾಧಿಕಾರಿಗಳು, ಹೀಗೆ ಬಹುತೇಕ ಸಿಬ್ಬಂದಿಗಳನ್ನು ಹಾಗೂ ಶಾಲಾ ಶಿಕ್ಷಕರನ್ನು ಅವೈಜ್ಞಾನಿಕ ಸಮೀಕ್ಷೆಗೆ ಬಳಸಿಕೊಂಡಿರುವುದು ಇಡೀ ಜಿಲ್ಲೆಯ ವ್ಯವಸ್ಥೆ ಹದಗೆಡಲು ಕಾರಣವಾಗಿದೆ. ಜನನ-ಮರಣ ಪ್ರಮಾಣ ಪತ್ರಗಳು, ಕಂದಾಯ ಇಲಾಖೆಗಳ ದಾಖಲೆ ಪತ್ರಗಳು, ಲೈಸೆನ್ಸ್ ಗಳು, ಹೀಗೆ ಜನಸಾಮಾನ್ಯರಿಗೆ ಅಗತ್ಯವಾಗಿರುವ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಜನರು ಪ್ರತಿದಿನ ಕಚೇರಿಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದ್ದು, ಎಷ್ಟೇ ಅಗತ್ಯ ಕಾರ್ಯಗಳಿದ್ದರೂ ಹತ್ತು ದಿನ ಬಿಟ್ಟು ಬನ್ನಿ ಎಂದು ಸಾರ್ವಜನಿಕರನ್ನು ವಾಪಸ್ ಕಳಿಸಲಾಗುತ್ತಿದೆ. ಇದರಿಂದಾಗಿ ನಿಗದಿತ ಅವಧಿಯೊಳಗೆ ಶಾಲೆಗಳಿಗೆ, ವಿವಿಧ ಕಚೇರಿಗಳಿಗೆ ಅಗತ್ಯವಾಗಿ ಸಲ್ಲಿಸಬೇಕಾಗಿರುವ ಪ್ರಮುಖ ದಾಖಲೆ ಪತ್ರಗಳ ವಿಳಂಬವಾಗುತ್ತಿದ್ದು ಜನರ ಸಮಸ್ಯೆಗಳಿಗೆ ಸರ್ಕಾರವೇ ನೇರ ಕಾರಣವಾಗುತ್ತಿದೆ ಎಂದರು.
ಇತ್ತೀಚೆಗೆ ಹೆರಿಗೆಯಾಗಿದ್ದರೂ, ಆರೋಗ್ಯ ಸಮಸ್ಯೆಯಿದ್ದರೂ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲೇಬೇಕೆಂದು ಒತ್ತಾಯ ಮಾಡುತ್ತಿರುವುದು ಮನುಷ್ಯತ್ವವಿರದ ರಾಜ್ಯ ಸರ್ಕಾರದ ಲಕ್ಷಣವಾಗಿದೆ. ಅತ್ತ ಸಮೀಕ್ಷೆಯೂ ಗೊಂದಲಮಯ, ಇತ್ತ ಜನಸಾಮಾನ್ಯರಿಗೂ ಕಿರುಕುಳ, ಒಟ್ಟಾರೆಯಾಗಿ ಎಲ್ಲರೂ ಕಾಂಗ್ರೆಸ್ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು.