ಕನಿಷ್ಟ ಕೂಲಿ ಜಾರಿಗಾಗಿ ಮೂಡುಬಿದಿರೆಯಲ್ಲಿ ಬೀಡಿ ಕಾರ್ಮಿಕರ ಹೋರಾಟ
ಸಿಐಟಿಯು ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಸರಕಾರ ಬೀಡಿ ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆ ಬರುವಂತೆ ಕನಿಷ್ಟ ಕೂಲಿ ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಆದರೂ ಇದನ್ನು ಜಾರಿ ಮಾಡುವ ಹೊಣೆಗಾರಿಕೆ ತೋರಿಲ್ಲ ಎಂದು ಆಪಾದಿಸಿದರು.
ಫೆಡರೇಶನ್ ಜಿಲ್ಲಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಬೀಡಿ ಕಾರ್ಮಿಕರು ಹೋರಾಟದ ಮೂಲಕ ಪಡೆದಿರುವ 1966ರ ಬೀಡಿ ಎಂಡ್ ಸಿಗಾರ್ ಅಕ್ಟ ಅನ್ನು ಸಂಹಿತೆಯಾಗಿ ಬದಲಾಯಿಸಿರುವುದು ಬೀಡಿ ಕೈಗಾರಿಕೆಗೆ ಮಾರಕವಾಗಿದೆ. ಕೇಂದ್ರ, ರಾಜ್ಯ ಸರಕಾರಗಳು ಮಾಲಕರ ಹಿತಾಸಕ್ತಿ ಕಾಪಾಡುತ್ತಿವೆ. ಬೀಡಿ ಕಾರ್ಮಿಕರಿಗೆ ಕಾನೂನು ಪ್ರಕಾರ ಸಲ್ಲುವ ಸವಲತ್ತನ್ನು ನಾಶ ಮಾಡುತ್ತಿವೆ. ಕನಿಷ್ಟ ಕೂಲಿ ಮತ್ತು ಬಾಕಿ ಇರುವ ಸವಲತ್ತನ್ನು ಜಾರಿ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.
ಎಐಟಿಯುಸಿ ಮುಂದಾಳುಸುರೇಶ್, ಸಿಐಟಿಯು ಮುಂದಾಳು ಕೆ. ಯಾದವ ಶೆಟ್ಟಿ ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.
ಸಂಘಟನೆ ಅಧ್ಯಕ್ಷೆ ರಮಣಿ ಪ್ರಸ್ತಾವನೆಗೈದರು.
ಲಕ್ಷ್ಮೀ, ಕರುಣಾಕರ ಮಾರಿಪಳ್ಳ, ಬೇಬಿ ಅಶ್ವತ್ಥಪುರ, ಪದ್ಮಾವತಿ ಪುತ್ತಿಗೆ, ಯಶವಂತಿ, ಕಲ್ಯಾಣಿ, ಕೃಷ್ಣಪ್ಪ ನಡಿಗುಡ್ಡೆ, ಲತಾ, ಶಕುಂತಳಾ, ವಾಣಿ ಮೊದಲಾದವರಿದ್ದರು.
ಹಳೇ ಪೊಲೀಸ್ ಠಾಣೆ ಬಳಿಯಿಂದ ಹಕ್ಕೊತ್ತಾಯ ಮೆರವಣಿಗೆ ನಡೆಯಿತು. ಗಿರಿಜಾ ವಂದಿಸಿದರು.
