ಪಿಲಿಕುಳ ಅರ್ಬನ್ ಇಕೋ ಪಾರ್ಕ್ ಯೋಜನೆಗೆ ಸಂಬಂಧಿಸಿ ಬಾಕಿ ಅನುದಾನವನ್ನು ಬಿಡುಗಡೆ ಮಾಡಲು ಶಾಸಕ ಮಂಜುನಾಥ ಭಂಡಾರಿ ಮನವಿ
ಮಂಗಳೂರಿನ ಪಿಲಿಕುಳದಲ್ಲಿ 356 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ಸಸ್ಯಸಂಪತ್ತು ಹಾಗೂ ವನ್ಯಜೀವಿ ಸಂರಕ್ಷಣೆ, ಕಲೆ ಮತ್ತು ಸಂಸ್ಕೃತಿ ಸಂರಕ್ಷಣೆ, ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ವಿಜ್ಞಾನ ಶಿಕ್ಷಣದ ಅರಿವು ನೀಡುವುದು ಮತ್ತು ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ 1996ರಲ್ಲಿ ಪಿಲಿಕುಳ ನಿಸರ್ಗಧಾಮವನ್ನು ಪ್ರಾರಂಭಿಸಲಾಯಿತು. ತದನಂತರ 2018ರಲ್ಲಿ ಇದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವಾಗಿ ಪರಿವರ್ತನೆಗೊಂಡಿದೆ.
ಉಲ್ಲೇಖ 1ರನ್ವಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪರಿಸರ ತೋಟ ಸ್ಥಾಪನೆ ಮಾಡಲು ಸೂಚಿಸಿರುವ ಪ್ರಕಾರ ಸದ್ರಿ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಪಿಲಿಕುಳ ನಿಸರ್ಗಧಾಮದಲ್ಲಿ 10 ಎಕ್ರೆ ಜಾಗವನ್ನು ನೀಡುವ ಬಗ್ಗೆ ಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಪ್ರಾದೇಶಿಕ ಕಛೇರಿ ಇವರು ಕೋರಿರುತ್ತಾರೆ.
ಉಲ್ಲೇಖ 2 ರನ್ವಯ ನಡೆದ ಸಭೆಯಲ್ಲಿ ಪಿಲಿಕುಳದಲ್ಲಿ ಅರ್ಬನ್ ಇಕೋ ಪಾರ್ಕ್ ಸ್ಥಾಪಿಸುವ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಯ ಕೋರಿಕೆಯ ಮೇರೆಗೆ 10 ಎಕ್ರೆ ಜಾಗವನ್ನು ನೀಡುವ ಬಗ್ಗೆ ಚರ್ಚಿಸಿ ನಗರ ಪ್ರದೇಶದಲ್ಲಿ ಸಾರ್ವಜನಿಕರಿಗೆ, ವಿಶೇಷವಾಗಿ ಮಹಿಳಾ ಸಂಘಟನೆಗಳು ಮತ್ತು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಕೈಗಾರಿಕಾ ಮಾಲಿನ್ಯ ನಿಯಂತ್ರಣ ಕ್ರಮಗಳ ಕುರಿತು ಅರಿವು ನೀಡುವ ಉದ್ದೇಶದಿಂದ ಅರ್ಬನ್ ಇಕೋ ಪಾರ್ಕ್ ಸ್ಥಾಪನೆಗಾಗಿ ಪಿಲಿಕುಳದಲ್ಲಿ 10.00 ಎಕರೆ ಜಮೀನು ಕಾಯ್ದಿರಿಸಲು ನಿರ್ಣಯಿಸಲಾಯಿತು. ಪ್ರಾರಂಭಿಕ ಹಂತದಲ್ಲಿ ಸದ್ರಿ ಯೋಜನೆಗೆ ರೂ.5.00 ಕೋಟಿ ಅಂದಾಜು ವೆಚ್ಚದ ಯೋಜನಾ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಉಲ್ಲೇಖ 3 ರನ್ವಯ, ಸದ್ರಿ ಪ್ರಸ್ತಾವನೆಗೆ 192ನೇ ಮಾಲಿನ್ಯ ನಿಯಂತ್ರಣ ಮಂಡಳಿ ಸಭೆಯಲ್ಲಿ ಅನುಮೋದನೆ ದೊರೆತು, ಪ್ರಥಮ ಹಂತವಾಗಿ ರೂ.2.00 ಕೋಟಿ ಮತ್ತು ದ್ವಿತೀಯ ಹಂತವಾಗಿ ರೂ.3.00 ಕೋಟಿ ಅನುದಾನವನ್ನು ಉಲ್ಲೇಖ 4 ಮತ್ತು 5 ರನ್ವಯ ಬಿಡುಗಡೆ ಮಾಡಲಾಗಿತ್ತು.
ಉಲ್ಲೇಖ 6 ರನ್ವಯ ಸದ್ರಿ ಯೋಜನೆಯ ಜೊತೆಗೆ ಜೀವನ ಶೈಲಿ ಪಾರ್ಕ್, ಕೈಗಾರಿಕಾ ಮಾದರಿಗಳು, ತ್ಯಾಜ್ಯ ಶುದ್ದೀಕರಣ ಮಾದರಿಗಳು, ವಾಯು ಮಾಲಿನ್ಯ ನಿಯಂತ್ರಣ ಮಾದರಿಗಳು ಹಾಗೂ ಹವಾಮಾನ ಬದಲಾವಣೆ ಮತ್ತಿತರ ಪೂರಕ ಮಾದರಿಗಳನ್ನು ಒಳಗೊಂಡಿರುವ ರೂ.17.60 ಕೋಟಿಗಳ ಅಂದಾಜು ವೆಚ್ಚದಲ್ಲಿ ವಿಸ್ತ್ರತ ಯೋಜನಾ ಪ್ರಸ್ತಾವನೆಯನ್ನು ತಯಾರಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಲಾಯಿತು.
ಉಲ್ಲೇಖ 7ರನ್ವಯ, 205ನೇ ಮಾಲಿನ್ಯ ನಿಯಂತ್ರಣ ಮಂಡಳಿಯ ಸಭೆಯಲ್ಲಿ ವಿಸ್ತ್ರತಾ ಯೋಜನಾ ಪ್ರಸ್ತಾವನೆಯನ್ನು ಅನುಮೋದಿಸಿ ಯೋಜನೆಯ ಸಂಪೂರ್ಣ ಅಭಿವೃದ್ಧಿಗೆ ಒಟ್ಟು ರೂ.13.00 ಕೋಟಿ ಹೆಚ್ಚುವರಿ ಹಣವನ್ನು ಮಂಡಳಿಯ ವತಿಯಿಂದ ನಾಲ್ಕು ಹಂತಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು..
ಈಗಾಗಲೇ ಬಿಡುಗಡೆಯಾಗಿರುವ ರೂ.5.00 ಕೋಟಿ ಅನುದಾನವನ್ನು ಉಪಯೋಗಿಸಿ ಪ್ರಥಮ ಹಂತದ ಈ ಕೆಳಗಿನ ಕಾಮಗಾರಿಗಳು ಪೂರ್ಣಗೊಂಡಿದ್ದು, ಸದ್ವಿನಿಯೋಗ ವರದಿಯನ್ನು ಉಲ್ಲೇಖ 8 ರನ್ವಯ ಮಂಡಳಿಗೆ ಸಲ್ಲಿಸಲಾಗಿದೆ.
ವಿಶ್ವವ್ಯಾಪಿ ಹರಡಿದ ಕೋವಿಡ್ ಮಹಾಮಾರಿಯಿಂದಾಗಿ ಎರಡು ಮತ್ತು ಮೂರನೇ ಹಂತದ ಕಾಮಗಾರಿಗಳನ್ನು 2022 ರವರೆಗೆ ಕೈಗೆತ್ತಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸದ್ರಿ ಯೋಜನೆಯ ಅನುಷ್ಠಾನ ಸ್ಥಗಿತಗೊಂಡಿತ್ತು. ಬಳಿಕ ಬಾಕಿ ಉಳಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಈಗಾಗಲೇ ಮಂಜೂರಾಗಿರುವ ಬಾಕಿ ಅನುದಾನಕ್ಕಾಗಿ ಉಲ್ಲೇಖ 9 ಮತ್ತು 10 ರನ್ವಯ ಕೋರಿಕೆಯನ್ನು ಸಲ್ಲಿಸಲಾಗಿದ್ದು, ಇಲ್ಲಿಯವರೆಗೆ ಅನುದಾನ ಬಿಡುಗಡೆ ಬಗ್ಗೆ ಯಾವುದೇ ಮಾಹಿತಿ ತಮ್ಮ ಕಛೇರಿಯಿಂದ ಬಂದಿರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಅರ್ಬನ್ ಇಕೋ ಪಾರ್ಕ್ ನಿರ್ಧಿಷ್ಟ ದ್ವೇಯೋದ್ದೇಶಗಳನ್ನು ಹೊಂದಿದ್ದು ಪಿಲಿಕುಳಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಪ್ರಾರಂಭಗೊಂಡ ಯೋಜನೆಯು ಅರ್ಧಕ್ಕೆ ನಿಂತಿರುವುದರಿಂದ, ಈಗಾಗಲೇ ನಿರ್ಮಿಸಲಾಗಿರುವ ಕಟ್ಟಡಗಳು ಬಳಕೆಯಾಗದೆ ಉಳಿದಿದ್ದು ಸದ್ರಿ ಯೋಜನೆಯ ಸಂಪೂರ್ಣ ಅನುಷ್ಠಾನಕ್ಕೆ ಬಾಕಿ ಉಳಿದಿರುವ ರೂ.13.00 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಈ ಮೂಲಕ ಕೋರಲಾಗಿದೆ. ತನ್ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ಈ ಯೋಜನೆಯು ಸಾಕಾರಗೊಂಡು ಈ ಭಾಗದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ, ಮಾಲಿನ್ಯ ನಿಯಂತ್ರಿಸುವ ಬಗ್ಗೆ ಕೈಗಾರಿಕಾ ಸಂಸ್ಥೆಗಳು ಅನುಸರಿಸುವ ಕ್ರಮಗಳ ಬಗ್ಗೆ ಮಾದರಿಗಳ ಮುಖಾಂತರ ಅರಿವು ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಬಹುದಾಗಿದೆ ಎಂದು ಮಂಜುನಾಥ ಭಂಡಾರಿ ಅವರು ಪತ್ರದಲ್ಲಿ ವಿವರಿಸಿದ್ದಾರೆ.