ಅಪಾರ್ಟ್ಮೆಂಟ್‌ನಲ್ಲಿ ಕಳವು ಮಾಡಿದ ಇಬ್ಬರ ಬಂಧನ

ಅಪಾರ್ಟ್ಮೆಂಟ್‌ನಲ್ಲಿ ಕಳವು ಮಾಡಿದ ಇಬ್ಬರ ಬಂಧನ


ಮಂಗಳೂರು: ನಗರದ ಲಾಲ್‌ಬಾಗ್‌ನ ಅಪಾರ್ಟ್ಮೆಂಟ್‌ವೊಂದರ ಮೂರು ಪ್ಲಾಟ್‌ಗಳಿಂದ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ವಿದೇಶಿ ಕರೆನ್ಸಿ ಮತ್ತು ಮೊಬೈಲ್ ಫೋನ್ ಕಳವುಗೈದ ಪ್ರಕರಣಕ್ಕೆ ಸಂಭಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಸ್ಸಾಂನ ಕಾಚಾರ್ ಜಿಲ್ಲೆಯ ಅಭಿಜಿತ್ ದಾಸ್ (24) ಹಾಗೂ ದೇಬಾ ದಾಸ್ (21) ಎಂದು ಗುರುತಿಸಲಾಗಿದೆ. ಆರೋಪಿ ಅಭಿಜಿತ್ ದಾಸ್ ಎಂಬಾತನ ಮೇಲೆ ಈ ಮೊದಲು ಬೆಂಗಳೂರು ನಗರ ಮತ್ತು ಅಸ್ಸಾಂ ಸೇರಿದಂತೆ ಹಲವು ಮನೆ ಕಳ್ಳತನ ಪ್ರಕರಣಗಳು ದಾಖಲಾಗಿವೆ.


ಅ.19, 20 ರಂದು ರಾತ್ರಿ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲ್ ಗ್ರಾಮ ಲಾಲ್‌ಬಾಗ್ ಹ್ಯಾಟ್ ಹಿಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿರುವ 3 ಫ್ಲಾಟ್‌ಗಳಿಗೆ ನುಗ್ಗಿದ ಕಳ್ಳರು ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ, 5000 ರೂ. ನಗದು, 3000 ದಿರ್‌ಹಂ ಹಾಗೂ ಮೊಬೈಲ್ ಫೋನ್ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ರಿಯಾಜ್ ರಶೀದ್ ಎಂಬವರು ನೀಡಿದ ದೂರಿನ ಮೇರೆಗೆ ಅ.20 ರಂದು ಬೆಳಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ 104/2025 ಕಲಂ 331(4), 305(ಎ) ಬಿಎನ್‌ಎಸ್-2023ನೇ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಉರ್ವ ಪೊಲೀಸ್ ಠಾಣೆಯ ಠಾಣಾಧಿಕಾರಿ ಮತ್ತು ಸಿಬ್ಬಂದಿಯವರು ಹಾಗೂ ಶ್ವಾನ ದಳ ಹಾಗೂ ಫಿಂಗರ್ ಪ್ರಿಂಟ್ ತಜ್ಞರ ತಂಡವು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಆರೋಪಿಗಳ ಪತ್ತೆ ಕಾರ್ಯವನ್ನು ನಡೆಸಿದೆ. ಪ್ರಕರಣ ದಾಖಲಾಗಿ ಸುಮಾರು 20 ಗಂಟೆಗಳ ಒಳಗಾಗಿ ಶೀಘ್ರ ಕಾರ್ಯ ಪ್ರವೃತ್ತರಾದ ಪೊಲೀಸರು, ಇಬ್ಬರು ಅಂತರಾಜ್ಯ ಮನೆ ಕಳ್ಳರನ್ನು ಅ.21ರ ಬೆಳಗಿನ ಜಾವ ಬೆಂಗಳೂರು ನಗರ ಪೊಲೀಸರ ಸಹಕಾರದಿಂದ ದಸ್ತಗಿರಿ ಮಾಡಿದ್ದಾರೆ.

ಆರೋಪಿಗಳಿಂದ ಕಳ್ಳತನ ಮಾಡಿದ್ದ ಎಲ್ಲಾ ಚಿನ್ನಾಭರಣಗಳನ್ನು, 5,000 ರೂ. ನಗದು, ಸುಮಾರು 70,000 ರೂ. ಮೌಲ್ಯದ 3,000 ದಿರ್‌ಹಂ ಹಾಗೂ ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಮುಂದಿನ ಹೆಚ್ಚಿನ ವಿಚಾರಣೆಗೆ ಪೊಲೀಸರ ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸಲಾಗುವುದು ಮತ್ತು ಇತರೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಗೆ ಒಳಪಡಿಸಲಾಗುವುದು.

ಈ ಕಾರ್ಯಾಚರಣೆಯನ್ನು ಡಿಸಿಪಿ ಕ್ರೈಂ ಅವರ ಮೇಲ್ವಿಚಾರಣೆಯಲ್ಲಿ ಕೇಂದ್ರ ಉಪ ವಿಭಾಗದ ಎಸಿಪಿ, ಪಿ.ಐ, ಉರ್ವ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article