ವಿಷ ಸೇವಿಸಿ ದಂಪತಿ ಆತ್ಮಹತ್ಯೆ
ಮೃತರನ್ನು ಕಡಂಬಾರ್ ನಿವಾಸಿಗಳಾದ ಅಜಿತ್ (35) ಮತ್ತು ಅವರ ಪತ್ನಿ ಶ್ವೇತಾ (27) ಎಂದು ಗುರುತಿಸಲಾಗಿದೆ. ಅಜಿತ್ ಪೈಂಟಿಂಗ್ ಕಾರ್ಮಿಕರಾಗಿದ್ದು, ಶ್ವೇತಾ ವರ್ಕಾಡಿ ಬೇಕರಿ ಜಂಕ್ಷನ್‌ನ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದರು.
ಸೋಮವಾರ ಸಂಜೆ ಘಟನೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿ ಇಬ್ಬರನ್ನು ದೇರಳ ಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಯಿತು. ಅಜಿತ್ ಸೋಮವಾರ ರಾತ್ರಿ ಮತ್ತು ಶ್ವೇತಾ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ದಿನ ಅಜಿತ್ ತಮ್ಮ ಮೂರು ವರ್ಷದ ಮಗನೊಂದಿಗೆ ಸಹೋದರಿಯ ಮನೆಗೆ ತೆರಳಿ, ‘ನಾವು ಹೊರಗೆ ಹೋಗುತ್ತಿದ್ದೇವೆ, ಮಗನನ್ನು ನೋಡಿಕೊಳ್ಳಿ’ ಎಂದು ಹೇಳಿ ಮರಳಿದ್ದರು ಎನ್ನಲಾಗಿದೆ. ಬಳಿಕ ಪತ್ನಿಯೊಂದಿಗೆ ವಿಷ ಸೇವಿಸಿರುವುದು ಬಹಿರಂಗವಾಗಿದೆ. ಸಂಜೆ ಮನೆ ವರಾಂಡಾದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಇಬ್ಬರನ್ನು ನೆರೆಹೊರೆಯವರು ಆಸ್ಪತ್ರೆಗೆ ಕರೆದೊಯ್ದರೂ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರ್ಥಿಕ ಮುಗ್ಗಟ್ಟು ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.