ಮನಸ್ಸಿನ ಶಾಂತಿ ನೆಮ್ಮದಿಗೆ ನಮ್ಮ ಭಾರತೀಯ ಸಂಸ್ಕೃತಿ ಕಲೆ ಯೋಗ ಒಂದೇ ರಾಜಮಾರ್ಗ: ಶ್ರೀ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್
Tuesday, October 7, 2025
ಮಂಗಳೂರು: ಮನಸ್ಸಿನ ಶಾಂತಿ ನೆಮ್ಮದಿಗೆ ಹಾಗೂ ನಿಯಂತ್ರಣಕ್ಕೆ ನಮ್ಮ ಭಾರತೀಯ ಸಂಸ್ಕೃತಿ ಕಲೆಯಾದ ಯೋಗ ಎಂಬುದೇ ರಾಜಮಾರ್ಗವಾಗಿದೆ. ವೈದ್ಯರು ಈಗ ಔಷಧಗಳೊಂದಿಗೆ ನಡಿಗೆ, ವ್ಯಾಯಾಮ ಹಾಗೂ ಯೋಗ ಮಾಡಿ ಎಂದು ಸೂಚಿಸುತ್ತಾರೆ. ಈಗ ವಿಶ್ವ ಸಂಸ್ಥೆ ಯೋಗವನ್ನು ಅಂಗೀಕರಿಸಿದೆ ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಹೇಳಿದರು.
ಅವರು ಇಂದು ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿ ಅಕ್ಟೋಬರ ತಿಂಗಳ ಸಂಜೆಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ವಿಶ್ವವೇ ಯೋಗದ ಕಡೆಗೆ ಮುಖ ಮಾಡುತ್ತಿದೆ. ಯೋಗದ ಬಗ್ಗೆ ಅರಿವು ಮೂಡಿದೆ. ಅಭ್ಯಾಸ ಮಾಡುವವ ಸಂಖ್ಯೆ ಹೆಚ್ಚಾಗುತ್ತದೆ. ಯೋಗ ಕಲಿತವರು (ನಿತ್ಯ ಅಭ್ಯಾಸ ಮಾಡುವವರು) ಅದರ ಪ್ರಯೋಜನಗಳನ್ನು ಇನ್ನೊಬ್ಬರಿಗೆ ಹಂಚುತ್ತಿರುವುದು ಕಂಡು ಬಂದಿದೆ. ನಮ್ಮ ಹೆಚ್ಚಿನ ಆರೋಗ್ಯ ಸಮಸ್ಯೆ ಉಂಟಾಗುವುದು ಮನಸ್ಸಿನ ದೋಷದಿಂದಲೇ ಎಂಬುದು ದೃಡಪಟ್ಟಿದೆ ಎಂದರು.
ಯೋಗ ಆಸನಗಳ ಅಭ್ಯಾಸವು ಶಕ್ತಿ ಮತ್ತು ನಮ್ಯತೆಯನ್ನು ಬೆಳೆಸುತ್ತದೆ. ಅದೇ ಸಮಯದಲ್ಲಿ ನಿಮ್ಮ ನರಗಳನ್ನು ಶಮನಗೊಳಿಸುತ್ತದೆ ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಆಸನಗಳು ಸ್ನಾಯುಗಳು, ಕೀಲುಗಳು ಮತ್ತು ಚರ್ಮ ಮತ್ತು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತವೆ ಯೋಗವು ವ್ಯಕ್ತಿಯ ಬಾಹ್ಯ ಆರೋಗ್ಯಕ್ಕೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಆತಂರಿಕ ಆರೋಗ್ಯಕ್ಕೆ ನೀಡುತ್ತದೆ ಎಂದು ತಿಳಿಸಿದರು.
40 ವರ್ಷಗಳಿಂದ ಯೋಗ ಶಿಕ್ಷಣ ಮೂಲಕ ಸಾವಿರಾರು ಜನರಿಗೆ ಮಾರ್ಗದರ್ಶನ ನೀಡಿರುವ ದೇಲಂಪಾಡಿ ಯೋಗ ಪ್ರತಿಷ್ಠಾನದ ‘ಯೋಗರತ್ನ’ ಗೋಪಾಲಕೃಷ್ಣ ದೇಲಂಪಾಡಿಯವರ ನೇತೃತ್ವದಲ್ಲಿ ಮಂಗಳೂರಿನ ಮಂಗಳಾದೇವಿ ಸಮೀಪದ ರಾಮಕೃಷ್ಣ ಮಠದಲ್ಲಿ ವರ್ಷಪೂರ್ತಿ ಯೋಗಾಸನ ಶಿಬಿರವನ್ನು ತಂಡ ತಂಡವಾಗಿ ಆಯೋಜಿಸುತ್ತಿದ್ದು ನಾಗರಿಕರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವ ಪ್ರಯೋಜನಗಳನ್ನು ತಿಳಿಸಿದರು.
ಶಿಬಿರದಲ್ಲಿ ಪ್ರಾರ್ಥನೆ, ಧ್ಯಾನ, ಅಷ್ಟಾಂಗ ಯೋಗದ ಮಾಹಿತಿ, ಆಸನಗಳು, ಪ್ರಾಣಾಯಾಮ ಮಂತ್ರ ಹಾಗೂ ಯಾವ ಕಾಯಿಲೆಗೆ ಯಾವ ಯೋಗ, ಮಂತ್ರ ಮುದ್ರೆಗಳು ತಿಳಿಸಿಕೊಡಲಾಗುವುದು. ಯೋಗ ಚಕ್ರದ ಮಾಹಿತಿ, ವರ್ಣ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ದೇಲಂಪಾಡಿಯವರು ಶಿಬಿರದ ಮಾಹಿತಿ ತಿಳಿಸಿದರು.
ದೇಲಂಪಾಡಿ ಶಿಷ್ಯರಾದ ಸುಮಾ, ಚಂದ್ರಹಾಸ ಬಾಳ, ಪ್ರೇಮ ಹಾಗೂ ಹರಿಣಿ ಇವರು ಸಹಕರಿಸಿದರು. ಆಸಕ್ತರು ನೋಂದಾಯಿಸಿಕೊಳ್ಳಲು ಆಶ್ರಮದ ಕಾರ್ಯಾಲಯ ದೂ.ಸಂ.: 0824-2414412 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.








