ಮುಖ್ಯನ್ಯಾಯಮೂರ್ತಿಗಳ ಮೇಲೆ ದಾಳಿ-ಕೋಮುವಾದಿ ಶಕ್ತಿಗಳು ಮನುವಾದಿ ವಿಷ ತುಂಬುತ್ತಿರುವುದಕ್ಕೆ ಮತ್ತೊಂದು ಉದಾಹರಣೆ: ಸಿಪಿಐ(ಎಂ) ಖಂಡನೆ
ಮಂಗಳೂರು: ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಕೃತ್ಯವನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನಲ್ಲಿ ನೋಂದಾಯಿಸಿಕೊಂಡಿರುವ ಮತ್ತು ದಸ್ತಗಿರಿಯಾಗಿರುವ ಸಂಬಂಧಪಟ್ಟ ವಕೀಲರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ತೆರೆದ ನ್ಯಾಯಾಲಯದ ಕೋಣೆಯಲ್ಲಿ ಶೂ ಎಸೆಯಲಾಗಿದ್ದು, ಸನಾತನ ಧರ್ಮವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಲಾಗಿದೆ ಎಂಬುದು ಅತ್ಯಂತ ಆಘಾತಕಾರಿ ಮತ್ತು ಶೋಚನೀಯ. ಜಾತಿವಾದಿ, ಮನುವಾದಿ ಮತ್ತು ಕೋಮುವಾದಿ ವಿಚಾರಗಳನ್ನು ಉತ್ತೇಜಿಸುವ ಬಿಜೆಪಿ ಮುಖ್ಯಮಂತ್ರಿಗಳು, ಸಚಿವರು ಮತ್ತು ನಾಯಕರ ಇತ್ತೀಚಿನ ಹೇಳಿಕೆಗಳು ಅಂತಹ ಕೃತ್ಯಗಳಿಗೆ ಧೈರ್ಯ ತುಂಬಿವೆ.
ಈ ಘಟನೆಯು ಹಿಂದುತ್ವ ಕೋಮುವಾದಿ ಶಕ್ತಿಗಳು ಸಮಾಜದೊಳಕ್ಕೆ ಮನುವಾದಿ ಮತ್ತು ಕೋಮು ವಿಷವನ್ನು ಚುಚ್ಚುತ್ತಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಇದು ಸಂಘ ಪರಿವಾರದ ಅಸಹಿಷ್ಣುತೆ ಮತ್ತು ತಮ್ಮ ಸಿದ್ಧಾಂತಕ್ಕೆ ಹೊಂದಿಕೆಯಾಗದ ಯಾವುದೇ ಅಭಿಪ್ರಾಯವನ್ನು ಸ್ವೀಕರಿಸಲು ಸಿದ್ಧವಿಲ್ಲದಿರುವುದನ್ನು ಬಿಂಬಿಸುತ್ತದೆ ಎಂದು ಪೊಲಿಟ್‌ಬ್ಯುರೊ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸಿಜೆಐ ಗವಾಯಿ ಅವರಿಗೆ ಕೇಂದ್ರ ಸರ್ಕಾರವು ಸಾಕಷ್ಟು ರಕ್ಷಣೆ ನೀಡಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ. ಸರ್ಕಾರವು ಅಸಹಿಷ್ಣುತೆಯನ್ನು ಹರಡುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ದೃಢ ಕ್ರಮಗಳನ್ನು ಕೈಗೊಳ್ಳಬೇಕು, ಅದೇ ಸಮಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಮತ ವ್ಯಕ್ತಪಡಿಸುವ ಹಕ್ಕನ್ನು ರಕ್ಷಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.