ಡಾ.ಡಿ.ಎ.ಶಂಕರ್ ಮೈಸೂರು ಅವರಿಗೆ 2025ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ
Thursday, October 30, 2025
ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ಪ್ರಾಯೋಜಕತ್ವದ 2025ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಮೈಸೂರಿನ ಡಾ.ಡಿ.ಎ.ಶಂಕರ್ ಅವರ ‘ಇರುವೆಯಂತೆ ನನ್ನೊಡನೆ’ ಎಂಬ ಹಸ್ತಪ್ರತಿಯು ಗೆದ್ದುಕೊಂಡಿದೆೆ ಎಂದು ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆ ಅವರು ಘೋಷಿಸಿದ್ದಾರೆ.
ಈ ಸಾಲಿನ ಸ್ಪರ್ಧೆಗೆ ಒಟ್ಟು 28 ಹಸ್ತಪ್ರತಿಗಳು ಬಂದಿದ್ದು ಪ್ರಸಿದ್ಧ ವಿಮರ್ಶಕರಾದ ಬೆಳಗೋಡು ರಮೇಶ ಭಟ್ (ವಿಭಾವರಿ ಭಟ್) ಮತ್ತು ಹೊಸ ಪೀಳಿಗೆಯ ವಿಮರ್ಶಕರಾದ ವಿಕಾಸ ಹೊಸಮನಿ ಹಾವೇರಿ ಹಾಗೂ ಡಾ. ಸುಭಾಷ್ ಪಟ್ಟಾಜೆ, ಕಾಸರಗೋಡು ಅವರು ನೀಡಿದ ಅಂಕಗಳ ಆಧಾರದಲ್ಲಿ ಈ ಪ್ರಶಸ್ತಿಗಳನ್ನು ನಿರ್ಣಯಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
1979ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ಹತ್ತು ಸಾವಿರದ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದು ಪ್ರಶಸ್ತಿ ಪ್ರದಾನ ಸಮಾರಂಭವು 2026ರ ಫೆಬ್ರವರಿ ತಿಂಗಳಲ್ಲಿ ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ನೇತೃತ್ವದಲ್ಲಿ ನೆರವೇರಲಿರುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.