ಗಣಿತ ಹೇಳಿಕೊಟ್ಟವರಿಗೆ ಗಣತಿ ಶಿಕ್ಷೆ!: ಮನೆ ಮನೆಗೆ ಹೋಗಲು ಮನೆಯವರದ್ದೇ ನೆರವು..
ಸಮೀಕ್ಷೆಗಾಗಿ ಸರಕಾರಿ ಶಾಲೆಯ ಶಿಕ್ಷಕ-ಶಿಕ್ಷಕಿಯರನ್ನು ಜಿಲ್ಲೆಯ ಬೇರೆ ಬೇರೆ ಊರುಗಳಿಗೆ ನಿಯೋಜಿಸಲಾಗಿದೆ. ಆ ಪರಿಸರದಲ್ಲಿ ಎಷ್ಟು ಮನೆಗಳಿಗೆ, ಅದು ಯಾವ ಭಾಗದಲ್ಲಿದೆ ಎಂಬುದರ ಬಗ್ಗೆ ಇದಕ್ಕಿಂತ ಮುಂಚೆ ಅವರಲ್ಲಿ ಯಾವುದೇ ಮಾಹಿತಿಯಿಲ್ಲ ಎಲ್ಲವನ್ನೂ ಮೊಬೈಲ್ ಆಪ್ ತೋರಿಸಿದಂತೆಯೇ ಮಾಡಿಕೊಂಡು ಹೋಗಬೇಕಾಗಿದೆ.
ಸಮೀಕ್ಷೆ ಮಾಡುವ ಶಿಕ್ಷಕರಲ್ಲಿ ಇನ್ನು ಒಂದೆರಡು ವಷ೯ಗಳಲ್ಲಿ ನಿವೃತ್ತಿ ಹೊಂದುವವರು, ಬಿಪಿ, ಶುಗರ್‌ನಿಂದ ಬಳಲುತ್ತಿರುವವರು, ಹಾಟ್೯ ಸಜ೯ರಿ ಆದವರು ಹಾಗೂ ಸರಿಯಾಗಿ ಮೊಬೈಲ್ ಬಳಕೆ ಮಾಡಲು ಗೊತ್ತಿಲ್ಲದವರೂ ಇದ್ದಾರೆ ಇಂತಹವರು ಮೊಬೈಲ್ ಆಪ್ ಅನ್ನು ಬಳಸಿಕೊಂಡು ಸಮೀಕ್ಷೆ ಮಾಡಲು ಪರದಾಟ ಮಾಡಿದ್ದಾರೆ.
ಮೊಬೈಲ್ ಆಪ್ ಬಳಸಿ ಸಮೀಕ್ಷೆ ಮಾಡುವಾಗ ಕೂಡಾ ಶಿಕ್ಷಕಿಯರು ತೀರಾ ಸಮಸ್ಯೆಯನ್ನು ಅನುಭವಿಸಿದ್ದಾರೆ. ಹೇಗೆಂದರೆ ಒಂದೇ ಕಡೆಯಲ್ಲಿ ಕ್ರಮ ಸಂಖ್ಯೆಯಂತೆ ಮನೆಗಳಿರುವುದಿಲ್ಲ ಬದಲಾಗಿ ಒಂದು ಮನೆಯ ಸಂಖ್ಯೆ ಒಂದು ಕಡೆಯಲ್ಲಿದ್ದರೆ ಅದರ ನಂತರದ ಕ್ರಮ ಸಂಖ್ಯೆ ಇನ್ನೊಂದು ಪ್ರದೇಶದಲ್ಲಿರುತ್ತದೆ ಮತ್ತು ಆಪ್‌ನ ಸಮಸ್ಯೆಯೂ ಪದೇ ಪದೇ ಕೈ ಕೊಡುತ್ತಿದ್ದರಿಂದ ಒಂದೇ ಮನೆಯಲ್ಲಿ ಮಧ್ಯಾಹ್ನದವರೆಗೂ ನಿಲ್ಲಬೇಕಾಗುತ್ತಿತ್ತು ಇದರಿಂದಾಗಿ ಶಿಕ್ಷಕರು ಈ ಬಾರಿಯ ಸಮೀಕ್ಷೆಯಲ್ಲಿ ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಬೀಸಿದ ಮಳೆಯಿಂದಾಗಿ ಶಾಲಾ ಮಕ್ಕಳಿಗೆ ಹಲವು ರಜೆಗಳು ಸಿಕ್ಕಿದೆ ಇದರ ಪರಿಣಾಮವಾಗಿ ಪಾಠಗಳು ಬಾಕಿ ಉಳಿದಿತ್ತು ಆ ನಂತರ ಮಕ್ಕಳಿಗೆ ನವರಾತ್ರಿ ರಜೆ, ಶಿಕ್ಷಕರಿಗೆ ಸಮೀಕ್ಷೆಯ ಸಜೆ. ಇದರಿಂದಾಗಿ ಮಕ್ಕಳಿಗೆ ಈಗಾಗಲೇ ಮುಗಿಯಬೇಕಾಗಿದ್ದ ಹಲವು ಪಾಠಗಳು ಪೆಡ್ಡಿಂಗ್‌ನಲ್ಲಿವೆ ಎಂಬ ಬಗ್ಗೆ ಶಿಕ್ಷಕರಿಗೆ ಚಿಂತೆ ಒಂದು ಕಡೆಯಾದರೆ, ಇನ್ನೂ ಸಮೀಕ್ಷೆ ನಡೆಸಿ ಮುಗಿದಿಲ್ಲವಲ್ಲ ಎಂಬ ಆತಂಕ ಇನ್ನೊಂದು ಕಡೆ.
ಸಮೀಕ್ಷೆಗಾಗಿ ತಮ್ಮ ಮನೆಯವರ ನೆರವು ಪಡೆದ ಶಿಕ್ಷಕರು:
ಈ ಬಾರಿ ನಡೆದ ಆಥಿ೯ಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಾಗಿ ಶಿಕ್ಷಕ-ಶಿಕ್ಷಕಿಯರು ತಮ್ಮ ಕುಟುಂಬವರ ನೆರವನ್ನೂ ಪಡೆದುಕೊಂಡಿದ್ದಾರೆ. ಬೆಳಗ್ಗೆ ಬೇಗ ಮನೆಯಿಂದ ಹೊರಡುವ ಶಿಕ್ಷಕಿಯರಿಗೆ ಸರಿಯಾದ ಸಮಯಕ್ಕೆ ಬಸ್‌ಗಳು ಸಿಗದ ಹಿನ್ನೆಲೆಯಲ್ಲಿ ಅವರ ಗಂಡ ಮತ್ತು ಮಕ್ಕಳೇ ತಮ್ಮ ದ್ವಿಚಕ್ರ, ಹಾಗೂ ಕಾರು ಮೂಲಕ ಕರೆದುಕೊಂಡು ಹೋಗಿ ರಾತ್ರಿವರೆಗೆ ನಿಂತು ಹಿಂದೆ ಕರೆದುಕೊಂಡು ಬಂದಿದ್ದಾರೆ.
ಸರಕಾರ ಶಿಕ್ಷಕರಿಗೆ ಸಮೀಕ್ಷೆಯ ಬಗ್ಗೆ ಸರಿಯಾದ ತರಬೇತಿ ನೀಡದೆ ಇದ್ದಿದ್ದರಿಂದ ಶೇ. 75ರಷ್ಟು ಮಂದಿ ಶಿಕ್ಷಕ ಶಿಕ್ಷಕಿಯರಿಗೆ ಸಮೀಕ್ಷೆ ತಲೆನೋವಾಗಿ ಪರಿಣಮಿಸಿತ್ತು. ಮನೆಯವರ ಮಾಹಿತಿಗಳನ್ನು ಪಡೆದು ಆಪ್ ಮೂಲಕ ವೇಗವಾಗಿ ಅಪ್ ಲೋಪ್ ಮಾಡಲಾಗದ ಟೀಚರ್ಸ್ ನವರು ತಮ್ಮ ಕಾಲೇಜ್‌ಗೆ, ಉದ್ಯೋಗಕ್ಕೆ ಹೋಗುವ ಮಗ ಅಥವಾ ಮಗಳನ್ನು ಕರೆದುಕೊಂಡು ಹೋಗಿ ಅವರ ಮೂಲಕ ಸಮೀಕ್ಷೆ ಮಾಡಿರುವುದು ಕೂಡಾ ಕಂಡು ಬಂದಿದೆ. ಈ ಮೂಲಕ ಸರಕಾರವು ಶಿಕ್ಷಕರು ತಮ್ಮೆಲ್ಲಾ ಕುಟುಂಬ ವಗ೯ವನ್ನು ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಅವರ ನೆಮ್ಮದಿಯನ್ನೂ ಕಸಿದುಕೊಂಡಿದೆ.
ಸಮೀಕ್ಷೆಗಾಗಿ ಪಂಚಾಯತ್‌ಗಳ ಸಹಕಾರ:
ನವರಾತ್ರಿ ರಜೆಯ ಸಂದಭ೯ದಲ್ಲಿ ಸಮೀಕ್ಷೆಯ ನೆಪದಲ್ಲಿ ಶಿಕ್ಷಕರ ರಜೆಯನ್ನು ಕಸಿದುಕೊಂಡು ಸಜೆ ನೀಡಿದ ಸರಕಾರ, ಸಮೀಕ್ಷೆ ಮುಗಿದಿಲ್ಲವೆಂದು ರಜೆಯನ್ನು ಮತ್ತೆ ವಿಸ್ತರಿಸಿ ಅ.೧೮ರಿಂದ ತರಗತಿಗಳು ಆರಂಭ ಎಂದು ತಿಳಿಸಿತ್ತು ಆದರೆ ರಜೆಯೇನೋ ಮುಗಿಯುತ್ತಾ ಬಂತು ಆದರೆ ಹಲವು ಮನೆಗಳ ಸಮೀಕ್ಷೆ ಮಾತ್ರ ಇನ್ನೂ ಬಾಕಿಯಿದೆ.
ಈ ನಿಟ್ಟಿನಲ್ಲಿ ಕೆಲವು ಪಂಚಾಯತ್‌ನವರು ಸಮೀಕ್ಷೆ ನಡೆಸಲು ಪಂಚಾಯತ್‌ಗಳಲ್ಲಿ ಅವಕಾಶವನ್ನು ಕಲ್ಪಿಸಿದ್ದು ಯಾರದ್ದೆಲ್ಲಾ ಸಮೀಕ್ಷೆ ಮಾಡಲು ಬಾಕಿಯಿದೆಯೋ ಅವರೆಲ್ಲರೂ ಅಲ್ಲಿಗೆ ಬಂದು ತಮಗೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡಲು ತಿಳಿಸಿದ್ದಾರೆ ಆದರೆ ಯಾರೆಲ್ಲಾ ಪಂಚಾಯತ್‌ಗೆ ತಾವೇ ಬಂದು ಸರಿಯಾಗಿ ತಮ್ಮ ಮಾಹಿತಿಯನ್ನು ನೀಡುತ್ತಾರೆಂಬುದೇ ಉದ್ಭವಿಸಿದ ಪ್ರಶ್ನೆ..!