ಗೋವಾದಲ್ಲಿ ಅಪೂರ್ವ ಗಜಲಕ್ಷ್ಮಿಯ ಶಿಲ್ಪ ಪತ್ತೆ
ಉನ್ನತವಾದ ಪದ್ಮಪೀಠದ ಮೇಲೆ, ಅಭಯ ಮತ್ತು ವರದ ಹಸ್ತೆಯಾಗಿ ಕುಳಿತಿರುವ ಲಕ್ಷ್ಮಿಯು ಹಿಂದಿನ ಬಲಗೈಯಲ್ಲಿ ಕಮಲದ ಮೊಗ್ಗು, ಹಿಂದಿನ ಎಡಗೈಯಲ್ಲಿಯೂ ಸಹ ಕಮಲದ ಮೊಗ್ಗನ್ನು ಹಿಡಿದಿದ್ದಾಳೆ. ಕಿವಿಯಲ್ಲಿ ಮಕರಕುಂಡಲಗಳಿವೆ, ಆಕರ್ಷಕ ಕರಂಡಮುಕುಟವನ್ನು ಧರಿಸಿದ ದೇವಿಯು ಮುಖದಲ್ಲಿ ದೈವೀಕಳೆಯ ವರ್ಚಸ್ಸು ಎದ್ದು ತೋರುತ್ತದೆ.
ದೇವಿಯ ಹಿಂಭಾಗದಲ್ಲಿ ಅಂಡಾಕಾರದ ಪ್ರಭಾವಳಿಯಿದ್ದು, ಮಧ್ಯದಲ್ಲಿ ಸಿಂಹದ ಲಲಾಟ ಬಿಂಬವಿದೆ. ಕಂಠೀಹಾರ, ಕೊರಳಹಾರ, ಕೇಯೂರ, ಮುಂತಾದ ಆಭರಣಗಳಿಂದ ಆಲಂಕೃತಳಾದ ಲಕ್ಷ್ಮಿಯ ಎಡ-ಬಲಗಳಲ್ಲಿ ಪವಿತ್ರ ಕಳಸಗಳನ್ನು ಹಿಡಿದಿರುವ ಎರಡು ಆನೆಗಳಿವೆ. ಪೀಠದ ಮಧ್ಯಭಾಗದಲ್ಲಿ ಗಂಡಭೇರುಂಡದ ಲತಾಕೋಷ್ಟಕವಿದೆ. ಶಿಲ್ಪವು ಸುಮಾರು 10ನೇ ಶತಮಾನದ ಶಿಲ್ಪಶೈಲಿಯಲ್ಲಿದ್ದು, ಗೋವಾ ಕದಂಬರ ಶಿಲ್ಪಶೈಲಿಯ ಉತ್ತಮ ಉದಾಹರಣೆಯಾಗಿದೆ. ಈ ಶಿಲ್ಪವು 50 ಸೆ.ಮೀ. ಎತ್ತರ ಹಾಗೂ 61 ಸೆ.ಮೀ. ಅಗಲವಾಗಿದೆ.
ಚಾರಿತ್ರಿಕ ಮಹತ್ವ:
ಗೋವಾದ ದೇವರ ಕಾಡುಗಳು ಹಾಗೂ ಕೆಲವು ದೇವಾಲಯಗಳ ಹೊರ ಆವರಣದಲ್ಲಿ ನಾನು ಕೆಲವು ಗಜಲಕ್ಷ್ಮಿ ಶಿಲ್ಪ ಫಲಕಗಳನ್ನು ನಾನು ಗಮನಿಸಿದ್ದೇನೆ ಅದರಲ್ಲಿ ಬಹುತೇಕ ಶಿಲ್ಪಗಳಲ್ಲಿ ಗಜಲಕ್ಷ್ಮಿಯ ಶಿಲ್ಪದ ಜೊತೆಗೆ ಯುದ್ಧದ ಚಿತ್ರಣಗಳು ಇವೆ ಹಾಗೂ ಗಜಲಕ್ಷ್ಮಿಯನ್ನು ಬುಡಕಟ್ಟು ಶೈಲಿಯಲ್ಲಿ ಚಿತ್ರಿಸಲಾಗಿದೆ. ಆದ್ದರಿಂದ, ಅವುಗಳು ದೇಶಿ ಶೈಲಿಯ ಗಜಲಕ್ಷ್ಮಿಯ ಶಿಲ್ಪಗಳು. ಆದರೆ, ಈಗ ಅಧ್ಯಯನಕ್ಕೆ ಒಳಪಡಿಸಿರುವ ಶಿಲ್ಪವು ಮಾರ್ಗ ಸಂಪ್ರದಾಯಕ್ಕೆ ಸೇರಿದ ಶಿಲ್ಪವಾಗಿದೆ. ಗಂಡಬೇರುಂಡದ ಸಾಂಕೇತಿಕ ಚಿತ್ರಣವು ಅತ್ಯಂತ ಸ್ಪಷ್ಟವಾಗಿ ಈ ಶಿಲ್ಪವು ಗೋವಾದ ವೈಷ್ಣಣವ ಸಂಪ್ರದಾಯಕ್ಕೆ ಸೇರಿದ ಶಿಲ್ಪವೆಂದು ಖಚಿತಪಡಿಸುತ್ತದೆ. ಗಂಡಭೇರುಂಡ ಶಿಲ್ಪವು ಕದಂಬ, ವಿಜಯನಗರ, ಮೈಸೂರಿನ ಒಡೆಯರ್ ಹಾಗೂ ಪ್ರಸ್ತುತ ಕರ್ನಾಟಕ ಸರ್ಕಾರದ ರಾಜ ಲಾಂಛನವಾಗಿದೆ.