ಕುಂಜಾರುಗಿರಿ ರಸ್ತೆ ದುಸ್ಥಿತಿಯ ವಿರುದ್ಧ ಹೊಂಡಗುಂಡಿಯಲ್ಲಿ ಬಾಳೆಗಿಡ ನೆಟ್ಟು ಕೃಷಿ ರಕ್ಷಿಸುವಂತೆ ವಿಶಿಷ್ಟ ಪ್ರತಿಭಟನೆ
ಕಾಪು ಪುರಸಭೆಯ ಬಹುಕೋಟಿ ಕುಡಿಯುವ ನೀರಿನ ಯೋಜನೆ ಹಾಗೂ ಹರ್‌ಘರ್ ಜಲ್ ಯೋಜನೆಯ ಕಾರಣಕ್ಕೆ ವರ್ಷದ ಹಿಂದೆ ಇಲ್ಲಿ ರಸ್ತೆ ಬದಿಯಲ್ಲಿ ನೀರಿನ ಪೈಪ್‌ಲೈನ್ ಅಳವಡಿಸಲು ರಸ್ತೆಯ ಅಂಚನ್ನು ಅಗೆದು ಪೈಪ್ ಅಳವಡಿಸಿ ಕೇವಲ ಮಣ್ಣು ಮುಚ್ಚಿ ಬಿಟ್ಟುಬಿಟ್ಟಿದ್ದರ ಪರಿಣಾಮ ಈ ಭಾಗದಲ್ಲಿ ಓಡಾಡುವ ವಾಹನಗಳ ಭರಾಟೆಯಿಂದಾಗಿ ರಸ್ತೆ ಸಂಪೂರ್ಣ ಹದೆಗೆಟ್ಟು ಹೋಗಿದೆ.
ದಿನ ಬಿಟ್ಟು ದಿನ ಸುರಿಯುತ್ತಿರುವ ಮಳೆಗೆ ರಸ್ತೆಯುದ್ದಕ್ಕೂ ಹೊಂಡಗುಂಡಿ ನಿರ್ಮಾಣಗೊಂಡು ಆಚಾರ್ಯ ಮಧ್ವರ ಜನ್ಮಭೂಮಿ ಪಾಜಕ ಕ್ಷೇತ್ರ, ಗಿರಿದುರ್ಗೆ ಖ್ಯಾತಿಯ ಕುಂಜಾರುಗಿರಿ ಬೆಟ್ಟದಲ್ಲಿವ ಶ್ರೀದುರ್ಗಾದೇವಿ ದೇವಸ್ಥಾನ, ಪರಶುರಾಮ ಸೃಷ್ಠಿ ಎಂಬ ಖ್ಯಾತಿಯ ಕರಾವಳಿಯಲ್ಲಿ ಪುರಾತನ ಇತಿಹಾಸ ಇರುವ ಈ ಭಾಗದ ಏಕೈಕ ಶ್ರೀಪರಶುರಾಮ ದೇವಸ್ಥಾನ, ಪಾಜಕ ಆನಂದ ತೀರ್ಥ ಸಮೂಹ ವಿದ್ಯಾಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ದಿನಂಪ್ರತೀ ನೂರಾರು ವಾಹನ ಓಡಾಡುತ್ತವೆ. ಕಟಪಾಡಿ ಮೂಲಕ ಪಡುಬೆಳ್ಳೆ ಮತ್ತು ಮೂಡುಬೆಳ್ಳೆ ಸಂಪರ್ಕಿಸುವ ಈ ಪ್ರಮುಖ ರಸ್ತೆಯ ಅವಗಣನೆ ನಡೆದಿದ್ದು ಇದನ್ನು ಸ್ಥಳೀಯರು ವಿಶಿಷ್ಡವಾಗಿ ಪ್ರತಿಭಟಿಸಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಕಾಪು ತಾಲೂಕು ವ್ಯಾಪ್ತಿಯಲ್ಲಿ ಸಾವಿರಾರು ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಗೆ ಅಲ್ಲಲ್ಲಿ ತಾತ್ಕಾಲಿಕ ತೇಪೆ ಕಾರ್ಯ ಚಾಲ್ತಿಯಲ್ಲಿದ್ದರೂ, ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ತೇಪೆಯಿಂದ ಹೊಂಡಮುಕ್ತ ರಸ್ತೆ ಕಾಣುವ ಗ್ಯಾರಂಟಿ ಇಲ್ಲ. ನವೆಂಬರ್ ತಿಂಗಳು ಪೂರ್ತಿ ಬಿಸಿಲು ಇದ್ದಲ್ಲಿ ಡಾಮರು ಪ್ಲ್ಯಾಂಟ್ ಓಪನ್ ಆದಲ್ಲಿ ಪೂರ್ಣ ಪ್ರಮಾಣದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಹೊಂಡಗಳನ್ನು ಮುಚ್ಚುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದೆ. ಸಂಬಂದಪಟ್ಟವರು ಇತ್ತ ಗಮನಹರಿಸುವರೋ ಕಾದು ನೋಡಬೇಕಿದೆ.