ಸುಳ್ಯದ ಕುಡಿಯುವ ನೀರಿನ ಯೋಜನೆಯ ಪ್ರಗತಿ ಕುರಿತು ಸಭೆ: ಕಡಿದು ಹಾಕಿದ ರಸ್ತೆಗಳು ದುರಸ್ತಿಯಾಗದ ಬಗ್ಗೆ ನ.ಪಂ. ಸದಸ್ಯರು ಗರಂ
ನಗರದಲ್ಲಿ ಕುಡಿಯುವ ನೀರಿನ ಯೋಜನೆಯ ಅನುಷ್ಠಾನ ಸಂದರ್ಭದಲ್ಲಿ ಡಾಮರು, ಕಾಂಕ್ರೀಟ್ ರಸ್ತೆಗಳನ್ನು, ರಸ್ತೆ ಬದಿಯ ಇಂಟರ್‌ಲಾಕ್ ಅಳವಡಿಸಿರುವುದನ್ನು ಕಡಿದು ಹಾಕಿರುವುದು ಸರಿಪಡಿಸದ ಬಗ್ಗೆ ನಗರ ಪಂಚಾಯತ್ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪೈಪ್‌ಲೈನ್ ಕಾಮಗಾರಿ ಆದ ಕಡೆಗಳಲ್ಲಿ ಕೂಡಲೇ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಬೇಕು, ಕಡಿದು ಹಾಕಿದ ರಸ್ತೆಗಳನ್ನು ಸರಿಪಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ರಸ್ತೆಯಲ್ಲಿ ನಡೆದಾಡಲು ಆಗದ ಪರಿಸ್ಥಿತಿ ಇದೆ, ಜನರು ನಮ್ಮನ್ನು ಕೇಳುತ್ತಿದ್ದಾರೆ. ಅವರಿಗೆ ನಾವು ಏನೆಂದು ಉತ್ತರ ಕೊಡಬೇಕು ಎಂದು ಪ್ರಶ್ನಿಸಿದ ಸದಸ್ಯರು ಆದ್ದರಿಂದ ಅಧಿಕಾರಿಗಳು 10 ದಿನದ ಒಳಗಾಗಿ ನೀರಿನ ಯೋಜನೆಯ ಕಾಮಗಾರಿಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಸರಿಪಡಿಸಿಕೊಡಬೇಕೆಂದು ಆಗ್ರಹಿಸಿದರು. ನಗರದ ಮುಖ್ಯ ಭಾಗಗಳಾದ ಆಲೆಟ್ಟಿ ಕ್ರಾಸ್ ರೋಡ್, ಗಾಂಧಿನಗರ ಗಾಂಧಿ ಪಾರ್ಕ್ ಬಳಿ, ಪೊಲೀಸ್ ಠಾಣೆಯ ಮುಂಭಾಗ, ವಿವೇಕಾನಂದ ಸರ್ಕಲ್, ರಥಬೀದಿ, ಜಯನಗರ ಮುಂತಾದ ಕಡೆಗಳಲ್ಲಿ ರಸ್ತೆ ಮೇಲೆ ಜಲ್ಲಿ ಕಲ್ಲುಗಳನ್ನು ಸುರಿಯಲಾಗಿದೆ. ಇದೀಗ ಆ ಕಲ್ಲುಗಳು ಹರಡಿ ಸ್ಥಳೀಯ ಅಂಗಡಿಯವರಿಗೆ, ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಸದಸ್ಯರು ದೂರಿದರು.
ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಯ ಮಂಗಳೂರು ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಶೋಭಾ ಲಕ್ಷ್ಮಿ ಮಾತನಾಡಿ, ಮಳೆ ಹಾಗೂ ಇನ್ನಿತರ ಸಮಸ್ಯೆಗಳಿಂದ ಕೆಲಸ ವಿಳಂಬವಾಗಿದೆ. ಇನ್ನು ಮುಂದೆ ಆ ರೀತಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತೇವೆ. ಕಾಮಗಾರಿ ಪೂರ್ತಿಯಾದ ಭಾಗದಲ್ಲಿ ನೀರಿನ ಸರಬರಾಜು ಆರಂಭಿಸಲು ಯೋಜನೆ ರೂಪಿಸುತ್ತೇವೆ. ಮನೆಗಳಿಗೆ ಸಂಪರ್ಕ ಬಾಕಿ ಇರುವಲ್ಲಿ ಕೂಡಲೇ ಸಂಪರ್ಕ ನೀಡಲು ಕ್ರಮಕೈಗೊಳ್ಳಲಾಗುವುದು. ಆದಷ್ಟು ಶೀಘ್ರದಲ್ಲಿ ರಸ್ತೆಗಳನ್ನು ಸರಿಪಡಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದರು. ರಾಷ್ಟ್ರೀಯಲ್ಲಿ ಕೆಲವೆಡೆ ಪೈಪ್ ಸಂಪರ್ಕ ಬಾಕಿ ಉಳಿದಿದೆ. ಅದರ ಸಂಪರ್ಕಕ್ಕೆ ನಗರ ಪಂಚಾಯತ್ ಸಹಕಾರ ಬೇಕಾಗಿದೆ ಎಂದು ಅವರು ಹೇಳಿದರು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಕಡಿದು ಹಾಕಿರುವ ರಸ್ತೆಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಅವರು ಸೂಚಿಸಿದರು.
ನಗರ ಮತ್ತು ಗ್ರಾಮೀಣ ಭಾಗದ ಕುಡಿಯುವ ನೀರಿನ ಯೋಜನೆಗೆ ಹೆದ್ದಾರಿಯಲ್ಲಿ ಪೈಪ್ ಅಳವಡಿಸುವ ಕುರಿತು ಚರ್ಚೆ ನಡೆಸಲಾಯಿತು.
ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿಶೋರಿ ಶೇಟ್, ಮುಖ್ಯಾಧಿಕಾರಿ ಬಸವರಾಜ್, ಕೆಯುಡಬ್ಲ್ಯುಎಸ್‌ನ ಸಹಾಯಕ ಇಂಜಿನಿಯರ್ ಶ್ರೀಕಾಂತ್, ಗುತ್ತಿಗೆದಾರ ಕಂಪನಿಯ ಅಬ್ದುಲ್ ನಿಝಾರ್ ಹಾಗೂ ಚೇತನ್ ರಾಜ್ ಉಪಸ್ಥಿತರಿದ್ದರು.
ಸಭೆಗೆ ಬಹುಗ್ರಾಮ ಕುಡಿ ನೀರು ಯೋಜನೆಯ ಇಂಜಿನಿಯರ್‌ಗಳಾದ ಮಣಿಕಂಠ, ಸಹಾಯಕ ಇಂಜಿನಿಯರ್ ಚೈತ್ರ ಭಾಗವಹಿಸಿದ್ದರು.
ಸಭೆಯ ಬಳಿಕ ಇಂಜಿನಿಯರ್ ಶೋಭಾಲಕ್ಷ್ಮಿ ಹಾಗೂ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸದಸ್ಯರಾದ ವಿನಯ್ ಕುಮಾರ್ ಕಂದಡ್ಕ, ಶರೀಫ್ ಕಂಠಿ, ಧೀರಾ ಕ್ರಾಸ್ತ, ನಗರ ಪಂಚಾಯತಿ ಮುಖ್ಯಾಧಿಕಾರಿ ಬಸವರಾಜ್, ಇಂಜಿನಿಯರ್ ಶಿವಕುಮಾರ್ ಸೇರಿದ ತಂಡವು ಕುರುಂಜಿಭಾಗ್ ನೀರಿನ ಟ್ಯಾಂಕ್ ಬಳಿ ಭೇಟಿ ನೀಡಿ ಕಾಮಗಾರಿ ಮತ್ತು ಅಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ವಿವೇಕಾನಂದ ಸರ್ಕಲ್, ಸುಳ್ಯ ಪೊಲೀಸ್ ಠಾಣೆ ಮುಂಭಾಗ ಆಲಟ್ಟಿ ಕ್ರಾಸ್ ರೋಡ್ ಮುಂತಾದ ಕಡೆಗಳಿಗೆ ತೆರಳಿ ರಸ್ತೆಯಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಆದಷ್ಟು ಶೀಘ್ರದಲ್ಲಿ ದುರಸ್ಥಿ ಕಾರ್ಯ ನಡೆಸಿಕೊಡುವ ಭರವಸೆಯನ್ನು ನೀಡಿದರು.
