ಅರಕ್ಷಿತ ಸ್ಮಾರಕ ಪಟ್ಟಿಯಿಂದ ಹೆಸರು ಕೈ ಬಿಡುವಂತೆ ಮನವಿ
Friday, October 10, 2025
ಉಜಿರೆ: ಪುರಾತತ್ವ ಇಲಾಖೆ ಬೆಳ್ತಂಗಡಿ ತಾಲೂಕಿನ ಮತ್ತು ಜಿಲ್ಲೆಯ ಕೆಲವು ಬಸದಿಗಳೂ ಸೇರಿದಂತೆ ಜಿಲ್ಲೆಯ ಹಲವು ಬಸದಿಗಳನ್ನು ’ಅರಕ್ಷಿತ ಸ್ಮಾರಕ’ಗಳೆಂದು ಗುರುತಿಸಿ ಘೋಷಣೆ ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದು, ಜಿಲ್ಲೆಯ ಜೈನ ಬಸದಿಗಳು ಪುರಾತನ ಬಸದಿಗಳಾಗಿದ್ದರೂ ಅವುಗಳ ಅಭಿವೃದ್ದಿಯನ್ನು ಜೈನ ಸಮಾಜವೇ ಮಾಡುತ್ತಾ ಬಂದಿದ್ದು ಅಲ್ಲಿ ಧಾರ್ಮಿಕ ವಿಧಿವಿಧಾನಗಳು ನಿತ್ಯ ನಡೆಯುತ್ತಿದೆ.
ಈ ಬಸದಿಗಳನ್ನು ಅರಕ್ಷಿತ ಸ್ಮಾರಕ ಎಂದು ಘೋಷಿಸುವುದರಿಂದಾಗಿ ಇಲ್ಲಿನ ಎಲ್ಲ ಕಾರ್ಯಗಳಿಗೆ ಅಡಚಣೆಯುಂಟಾಗುವ ಸಾಧ್ಯತೆಯಿದ್ದು , ಈ ಹಿನ್ನಲೆಯಲ್ಲಿ ಈ ಬಸದಿಗಳನ್ನು ಅರಕ್ಷಿತ ಸ್ಮಾರಕ ಎಂದು ಘೋಷಿಸುವುದನ್ನು ಕೈಬಿಡಬೇಕು ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಜಿಲ್ಲಾಧಿಕಾರಿಯವರಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.
ಈ ಬಗ್ಗೆ ರಕ್ಷಿತ್ ಶಿವರಾಂ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಜೈನ್ ಸಮುದಾಯದ ಮುಖಂಡರುಗಳು ಮನವಿ ಸಲ್ಲಿಸಿದರು.