ಶಾರಾದೋತ್ಸವ ಮೆರವಣಿಗೆಗೆ ಪೊಲೀಸರಿಂದಲೇ ಅಡ್ಡಿ: ಪ್ರಕರಣ ಹಿಂಪಡೆಯದಿದ್ದರೆ ಹೋರಾಟ
ಅವರು ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಘಟನೆ ಬಳಿಕ ಶಾರದೋತ್ಸವ ಮೆರವಣಿಗೆ ಅಲ್ಲೇ ಸ್ಥಗಿತಗೊಳಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಯಿತು. ಈ ವೇಳೆ ಬಿಜೆಪಿ ಹಿರಿಯ ಮುಖಂಡರು ಠಾಣೆಯಲ್ಲಿ ಸಭೆ ನಡೆಸಿ ಇಬ್ಬರನ್ನು ಬಿಡುಗಡೆ ಮಾಡಿಸಲಾಯಿತು. ಇದರ ಬಳಿಕ ಶಾರದೋತ್ಸವ ವಿಸರ್ಜನೆ ಮಾಡಲಾಗಿದೆ. ಇದೇ ಘಟನೆಗೆ ಸಂಬಂಧಿಸಿ ಪೊಲೀಸರು 30 ಜನರ ಸಹಿತ ಇತರ 150 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಮಂಡಲ ಪ್ರ.ಕಾ. ವಕೀಲರಾದ ಮೋಹನ್ ರಾಜ್ ಕೆ.ಆರ್. ಮಾತನಾಡಿ, ಉಳ್ಳಾಲ ಶಾರದೋತ್ಸವ ಗಲಾಟೆಯು ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ಮನಸ್ಥಿತಿಯ ಮುಂದುವರಿದ ಭಾಗವಾಗಿದೆ. ಪೊಲೀಸರ ಷರತ್ತುಗಳನ್ನು ಪಾಲಿಸಿಯೇ ಮೊಸರು ಕುಡಿಕೆ, ಶಾರದೋತ್ಸವಗಳನ್ನು ಆಚರಿಸಲಾಗಿದೆ. ಉಳ್ಳಾಲದ ದಸರಾ ಮೆರವಣಿಗೆಯಲ್ಲಿ ಪೊಲೀಸರು ಅತಿರೇಕ ಪ್ರದರ್ಶಿಸಿದ ಪರಿಣಾಮ ಗೊಂದಲ ಉಂಟಾಗಿದೆ. ಶಾರದಾ ವಿಗ್ರಹವನ್ನ ರಸ್ತೆಯಲ್ಲಿರಿಸಿ ಹಿಂದೂಗಳ ಭಾವನೆಗೆ ಪೊಲೀಸರು ಧಕ್ಕೆ ತಂದಿದ್ದಾರೆ ಎಂದು ಹೇಳಿದರು.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ರಕ್ಷಿತ್ ಸೇರಿ ಮೂವರು ಯುವಕರನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ರಕ್ಷಿತ್ನ ಮೇಲೆ ಮೋಟಾರು ವಾಹನ ಕಾಯ್ದೆ ಸಂಬಂಧಿ ಪ್ರಕರಣ ಇದ್ದು, ಅದನ್ನೇ ಮುಂದಿಟ್ಟು ಆತನನ್ನ ದೊಡ್ಡ ಕ್ರಿಮಿನಲ್ ತರ ಬಿಂಬಿಸಲಾಗಿದೆ ಎಂದು ಆರೋಪಿಸಿದರು.
ಸುಪ್ರೀಮ್ ಕೋರ್ಟ್ ನಿರ್ದೇಶನದ ಪ್ರಕಾರ ಆರೋಪಿಗೆ ನೋಟೀಸು ಕೊಟ್ಟು, ವಶಕ್ಕೆ ಪಡೆದು ವಿಚಾರಣೆ ನಡೆಸಿ ಕೇಸು ದಾಖಲಿಸಬೇಕು. ಆದರೆ ರಕ್ಷಿತ್ ನನ್ನ ಮುಂಜಾನೆ ಎರಡು ಗಂಟೆಗೆ ಏಕಾಏಕಿ ಬಂಧಿಸಿ, ಏಳು ಗಂಟೆಗೆ ತರಾತುರಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮತ್ತಿಬ್ಬರು ಯುವಕರನ್ನು ಮಧ್ಯರಾತ್ರಿಯೇ ಬಿಟ್ಟು ಕಳುಹಿಸಿದ್ದು, ಘಟನೆ ಖಂಡಿಸಿ ಠಾಣೆ ಮುಂದೆ ಜಮಾಯಿಸಿದ್ದ ಮೂವತ್ತು ಮಂದಿ ಮತ್ತು ಇತರರ ಮೇಲೆ ಕೇಸು ದಾಖಲಿಸಲಾಗಿದೆ. ವಾರದೊಳಗೆ ಈ ಎಲ್ಲಾ ಕೇಸುಗಳನ್ನ ಹಿಂಪಡೆಯಬೇಕು. ಇಲ್ಲವಾದಲ್ಲಿ ಬಿಜೆಪಿ ಇದರ ವಿರುದ್ಧ ಗಂಭೀರ ಹೋರಾಟ ನಡೆಸುತ್ತದೆ ಎಂದು ಎಚ್ಚರಿಸಿದರು.
ಉಳ್ಳಾಲ ಶಾರದೋತ್ಸವ ಘಟನೆ ಕುರಿತಂತೆ ಆಯಿಷಾ ಮೊಹಮ್ಮದ್ ಎಂಬ ಹೆಸರಲ್ಲಿ ಹಿಂದೂಗಳನ್ನ ಅಣಕಿಸಿರುವ ಉದ್ರೇಕಕಾರಿ ಪೋಸ್ಟ್ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ ಪೊಲೀಸರು ಇದರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹಿಂದೂಗಳು ಮಾತ್ರ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ ಕೂಡಲೆ ಪೊಲೀಸರು ಸುಮೊಟೊ ಕೇಸು ಹಾಕುತ್ತಾರೆಂದು ಮೋಹನ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲ್, ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಉಳ್ಳಾಲ ಮೊಗವೀರ ಸಮಾಜದ ಮುಖಂಡ ಬಾಬು ಬಂಗೇರ, ಬಿಜೆಪಿ ಯುವಮೋರ್ಚದ ಜಿಲ್ಲಾ ಉಪಾಧ್ಯಕ್ಷರಾದ ನಿಶಾಂತ್ ಪೂಜಾರಿ, ಯಶವಂತ ಅಮೀನ್ ಉಪಸ್ಥಿತರಿದ್ದರು.