ಮಾನವ ಅಸ್ಥಿಪಂಜರದ ಗುರುತು ಪತ್ತೆ

ಮಾನವ ಅಸ್ಥಿಪಂಜರದ ಗುರುತು ಪತ್ತೆ


ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ದೇವಿಪುರದ ಅಕ್ಷಯ ಫಾರ್ಮ್‌ನಲ್ಲಿ ಮಂಗಳವಾರ ಬೆಳಗ್ಗೆ ಬೆಳಕಿಗೆ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾನವನ ಅಸ್ಥಿಪಂಜರ ಬಿಹಾರ ಮೂಲದಿಂದ ಬಂದು ಮಂಜೇಶ್ವರದಲ್ಲಿ ನೆಲೆಸಿದ್ದ ವ್ಯಕ್ತಿಯದ್ದಿರಬಹುದೆಂದು ಪೊಲೀಸರು ಸಿಕ್ಕ ದಾಖಲೆಗಳ ಆಧಾರದಲ್ಲಿ ಶಂಕಿಸಿದ್ದಾರೆ. 

ಬಿಹಾರ ಮೂಲದ ರಾಹುಲ್ ಕುಮಾರ್ ಎಂಬಾತ ಎರಡು ತಿಂಗಳ ಹಿಂದೆ ಕೇರಳದಲ್ಲಿ ನಾಪತ್ತೆಯಾದ ಕುರಿತು ಮಂಜೇಶ್ವರ ಠಾಣೆಯಲ್ಲಿ ಆಗಸ್ಟ್ 7ರಂದು ಪ್ರಕರಣ ದಾಖಲಾಗಿತ್ತು. ಆದರೆ ಈತ ಎಲ್ಲಿಗೆ ಹೋಗಿದ್ದಾನೆ ಎಂಬ ಯಾವ ಸುಳಿವೂ ಸಿಕ್ಕಿರಲಿಲ್ಲ.

ಈತನ್ಮಧ್ಯೆ ಅ.8 ರಂದು ಅಕ್ಷಯ ಫಾರ್ಮ್‌ನೊಳಗಡೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯ ಕಾರ್ಮಿಕರು ಬೆಳಿಗ್ಗೆ ಅಸ್ಥಿಗಳನ್ನು ಗಮನಿಸಿ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಉಳ್ಳಾಲ ಠಾಣಾ ಪೊಲೀಸರು ಮತ್ತು ಸೋಕೊ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮರದ ಕೆಳಗಡೆ ಮಾನವನ ತಲೆಬುರುಡೆ, ಅಸ್ಥಿಗಳು, ಹಸಿರು ಬರ್ಮುಡಾ ಚಡ್ಡಿ ಮತ್ತು ಹಸಿರು ಟೀ ಶರ್ಟ್ ಪತ್ತೆಯಾದವು. ಮರದ ಗೆಲ್ಲಿನಲ್ಲಿ ನೈಲಾನ್ ಹಗ್ಗದ ನೇಣಿನ ಕುಣಿಕೆ ಕಂಡುಬಂದಿದ್ದು, ಅದರಲ್ಲಿ ಹೆಡ್ಫೋನ್ ಹಾಗೂ ಎಲುಬುಗಳು ನೇತಾಡುತ್ತಿದ್ದವು. ಇನ್ನೊಂದು ಗೆಲ್ಲಿನಲ್ಲಿ ಕೇಸರಿ ಶಾಲು ಜೋತು ಬಿದ್ದಿತ್ತು. ಬರ್ಮುಡಾ ಚಡ್ಡಿಯ ಜೇಬಿನಲ್ಲಿ ಮೊಬೈಲ್ಫೋನ್ ಕೂಡ ಪತ್ತೆಯಾಗಿದ್ದಾಗಿ ಪೊಲೀಸರು ತಿಳಿಸಿದ್ದರು.

ದೇಹವು ಸಂಪೂರ್ಣವಾಗಿ ಕೊಳೆತು ಹೋಗಿದ್ದು ಕೇವಲ ಬುರುಡೆ ಮತ್ತು ಎಲುಬುಗಳು ಮಾತ್ರ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಘಟನೆ ಹಲವು ತಿಂಗಳ ಹಿಂದೆ ನಡೆದಿರಬಹುದೆಂದು ಶಂಕಿಸಲಾಗಿತ್ತು. ಆದರೆ ಪೊಲೀಸ್ ತನಿಖೆಯ ವೇಳೆ ಮೃತನ ಬಟ್ಟೆಯಲ್ಲಿದ್ದ ಮೊಬೈಲ್ ಆಧರಿಸಿ ಈ ಅಸ್ಥಿಪಂಜರ ಬಿಹಾರ ಮೂಲದ ರಾಹುಲ್ ಕುಮಾರ್ನದ್ದು ಎನ್ನುವುದನ್ನು ಪತ್ತೆಹಚ್ಚಿದ್ದಾರೆ.

ಅಕ್ಷಯ ಫಾರ್ಮ್ ಸುತ್ತಲೂ ಆವರಣ ಗೋಡೆಯಿದ್ದರೂ, ಅದರೊಳಗೆ ಈತ ಹೇಗೆ ಬಂದಿರಬಹುದು ಎನ್ನುವುದು ಕುತೂಹಲ ಮೂಡಿದ್ದು, ಈ ಬಗ್ಗೆ ಉಳ್ಳಾಲ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article